The Pursuit of Happyness



“ದಿ ಪಸ್ರ್ಯೂಟ್ ಆಫ್ ಹ್ಯಾಪಿನೆಸ್” ಎಂಬೀ ಹಾಲಿವುಡ್ ಚಲನಚಿತ್ರವನ್ನು ನೀವು ಅದೆಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಚಲನಚಿತ್ರ! ಎತ್ತ ನೋಡಿದರೂ ಸೋಲನ್ನೇ ಕಾಣುವ ಲಕ್ಷಾಂತರ ಮನುಷ್ಯರಿಗೆ ಈ ಚಿತ್ರ ಅದಮ್ಯ ನಂಬಿಕೆ, ಉತ್ಸಾಹ, ಧೈರ್ಯಗಳ ಹುಟ್ಟಿಸುತ್ತದೆ.ಎಡವಟ್ಟುಗಳೇ ತುಂಬಿರುವ ನನ್ನಂಥಹವನ ಬದುಕಿಗಂತೂ ಈ ಚಿತ್ರ ಒಂದು ಬಗೆಯ ಕಿಕ್!



ಜಗತ್ತಿನ ಹೊಸ ಅಲೆ ಸಿನಿಮಾಗಳಿಗೆ ಜಾಡು ತೋರಿಸಿದ ಇಟೆಲಿಯ “ಬೈಸಿಕಲ್ ಥೀವ್ಸ್” ಸಿನಿಮಾದ ಜೊತೆ ಈ ಸಿನಿಮಾವನ್ನು ಹೋಲಿಸಿದವರೂ ಇದ್ದಾರೆ. ಈ ಸಿನಿಮಾ ಅತ್ತ ಕಲಾತ್ಮಕವೂ ಅಲ್ಲದ ಮನರಂಜನೀಯವೂ ಅಲ್ಲದ ಅಥವ “ಫೀಲ್ ಗುಡ್ ಮೂವಿ”ಯೂ ಅಲ್ಲದ ಸಿನಿಮಾ! ಇದರ ಸರಳ-ಸಂಕೀರ್ಣ ಕಥನ ನಮ್ಮನ್ನದು ತನ್ನತ್ತ ಎಳೆಯುತ್ತಲೇ ಇರುತ್ತದೆ; ಮತ್ತೆ ಮತ್ತೆ ನೋಡಿದರೂ ಮತ್ತೆ ನೋಡುವ ಎನ್ನಿಸುವಂತಹ ಸಿನಿಮಾ ಇದು! ಒಳಗಿರುವ ಮಾಂಸವನ್ನೆಲ್ಲ ಎಳೆದುಕೊಂಡಿದ್ದರೂ ಮತ್ತೆ ಮತ್ತೆ ಎಳೆಯೋಣ ಅನ್ನಿಸುವಂತಹ “ನಲ್ಲಿ ಮೂಳೆ” ಸಿನಿಮಾ ಇದು!

ಅಮೆರಿಕಾ ಎಂಬ ರಾಷ್ಟ್ರದ ಮೂಲ ಭಿತ್ತಿ, ಅದರ ವಾಸ್ತವ, ವ್ಯಕ್ತಿ ಸ್ವಾತಂತ್ರ್ಯದ ಹೋರಾಟಗಳು ಹೀಗೆ ಈ ಚಿತ್ರ ಹಲವಾರು ಆಯಾಮಗಳನ್ನು ಹೊಂದಿದ್ದರೂ ಅದು ನನಗೆ ತಾಕುವುದು ಸಾಮಾನ್ಯನೊಬ್ಬನ ನೋವು-ನಲಿವುಗಳ ಕಾವ್ಯವಾಗಿಯೇ! ಒಂದು ಬ್ಲ್ಯಾಕ್ ಕಾಮಿಡಿಯಾಗಿಯೇ! ಅತ್ತ ಕಲಾತ್ಮಕವೂ ಅಲ್ಲದ ಇತ್ತ ಪೂರ್ಣ ಪ್ರಮಾಣದ ವ್ಯಾಪಾರೀ ಸಿನಿಮಾವೂ ಆಗಿರದ ಈ ‘ಪರ್‍ಸ್ಯೂಟ್...’ನ್ನು ಮಿಡ್ಲ್ ಸಿನಿಮಾ ಎನ್ನಬಹುದೇನೊ!   

ಹಾಲಿವುಡ್‍ನ ಬಹುತೇಖ ಸಿನಿಮಾಗಳು (ಮಾರ್ಟಿನ್ ಸ್ಕಾರ್ಸೆಸಿ, ಟರಾಂಟಿನೊರಂತಹವರನ್ನು ಹೊರತುಪಡಿಸಿ) ನಿಜ ವಾಸ್ತವವನ್ನು, ಅಮೆರಿಕನ್ನರ ಬಡತನವನ್ನು, ಸಾಮಾನ್ಯರ ಕಷ್ಟ ಸುಖಗಳನ್ನು ತೋರಿಸುವುದಿಲ್ಲ. ಅಮಾನುಷ ಜಗತ್ತು, ಫ್ಯಾಂಟಸಿಯ ಅಬ್ಬರಗಳು, ಅತಿರೇಕದ ಇತಿಹಾಸಗಳೇ ಹಾಲಿವುಡ್‍ನ ತುಂಬಾ ಮೆರೆಯುತ್ತಿರುತ್ತವೆ. ಹೀಗಿದ್ದರೂ ಯುರೋಪಿನ ‘ಹೊಸ ಅಲೆ’ ಸಿನಿಮಾಗಳಂತೆ ಹಾಲಿವುಡ್‍ನಲ್ಲೂ ವಾಸ್ತವಕ್ಕೆ ಸನಿಹವಾದ ಸಿನಿಮಾಗಳೂ ಬರುತ್ತಿವೆ. ಇಟಲಿ, ಫ್ರಾನ್ಸ್ ಗಳ  ‘ನ್ಯೂ ವೇವ್’ ಸಿನಿಮಾಗಳು ಮೂಡಿಸಿದ ಎಚ್ಚರ, ನೆಲ ಮೂಲದ ಪ್ರಜ್ಞೆ , ಅಂಚಿಗೆ ಸರಿಸಲ್ಪಟ್ಟವರ/ ತುಳಿತಕ್ಕೊಳಗಾದವರ ಬಗೆಗಿನ ಕಾಳಜಿ ಇಂತಹ ನಮ್ಮ ಕಣ್ಣು “ಕಾಣುವ” ವಾಸ್ತವವೆಲ್ಲವನ್ನು ಒಳಗೊಂಡ ಸಿನಿಮಾಗಳು ಆಗಾಗ ಬರುತ್ತಿವೆ. ಈ ತೆರನಾದ 2006ರ ಒಂದು ಹಾಲಿವುಡ್ ಸಿನಿಮಾವೇ ಈ “ದಿ ಪಸ್ರ್ಯೂಟ್ ಆಫ್ ಹ್ಯಾಪಿನೆಸ್”

ಈ ಸಿನಿಮಾದ ಹೆಸರಿನಲ್ಲೇ ಒಂದು ರೀತಿಯ ವ್ಯಂಗ್ಯವಿದೆ; Happiness  ಎಂದು ಇರಬೇಕಾಗಿದ್ದ ಸ್ಪೆಲ್ಲಿಂಗ್‍ನ್ನು Happyness ಎಂದು ಬೇಕೆಂತಲೇ ಬರೆದು (ಈ ಕುರಿತು ಸಿನಿಮಾದ ಮೊದಲ ದೃಶ್ಯದಲ್ಲೇ ಒಂದು ಘಟನೆ ಬರುತ್ತದೆ) ಒಟ್ಟು ಕತೆಯ ಅಲಿಗೆರಿಯನ್ನು, ವ್ಯಂಗ್ಯವನ್ನು ನಮ್ಮ ಕಣ್ಣಿಗೆ ತಲುಪಿಸಲಾಗುತ್ತದೆ.

ಅಮೆರಿಕಾದ (ಮೂಲನಿವಾಸಿಗಳಲ್ಲದ) ಹದಿಮೂರು ಕಾಲೊನಿಗಳು ಬ್ರಿಟನ್‍ನ ಮುಷ್ಠಿಯಿಂದ ಬಿಡಿಸಿಕೊಂಡು 1776ರಲ್ಲಿ ಸ್ವತಂತ್ರಗೊಂಡಾಗ “The United States Declaration of Independence” ಎಂಬ ಒಡಂಬಡಿಕೆ, ಒಪ್ಪಂದಗಳ ಸಂವಿಧಾನಕ್ಕೆ ಚಾಲನೆ ನೀಡಿದವು. ಈ ಒಡಂಬಡಿಕೆ ಮೂರು ಮುಖ್ಯ ಘೋಷಣೆಗಳನ್ನು ತಮ್ಮ ರಾಷ್ಟ್ರ ನಿರ್ಮಾಣದ ಗುರಿಗಳು ಎಂದು ಸಾರಿಕೊಂಡವು. ಆ ಮೂರು ಘೋಣೆಗಳೆಂದರೆ: ಸ್ವಚ್ಛಂದ ಬದುಕು, ಚೆಂದ ಸ್ವಾತಂತ್ರ್ಯ ಮತ್ತು ಸಂತೋಷ-ನೆಮ್ಮದಿಗಳಿಗಾಗಿ ಪ್ರಯತ್ನ. ಈ ಮೂರು ಘೋಷಣೆಗಳಲ್ಲಿ ಒಂದಾದ ‘ಸಂತೋಷ-ನೆಮ್ಮದಿಗಳಿಗಾಗಿ ಪ್ರಯತ್ನ –The Pursuit of Happyness- ಎನ್ನುವುದೇ ಈ ಚಿತ್ರದ ಟೈಟಲ್! ಅಮೆರಿಕಾದ ಪ್ರತಿ ಪ್ರಜೆಯೂ ಸಂತೋಷ-ನೆಮ್ಮದಿಗಳ ಕಂಡುಕೊಂಡಿದ್ದಾನೆಯೇ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಶುರುವಾಗುವ ಈ ಸಿನಿಮಾ ವೈಯುಕ್ತಿಕ ಕತೆಯನ್ನು ಹೇಳುತ್ತಲೇ ಅಮೆರಿಕಾದ ಬಡತನವನ್ನು ಚಿತ್ರಿಸುತ್ತಾ ಇಡೀ ವಿಶ್ವದ ಯೂನಿವರ್ಸಲ್ ಕತೆಯಾಗಿ ಮಾರ್ಪಾಟಾಗುತ್ತದೆ.


ಲೇಖನವ ಮುಂದುವರೆಸುವ ಮುಂಚೆ ಒಂದು ಮನವಿ:.

ಮಾನವ ಬದುಕಿನಲ್ಲಿ ಲೌಕಿಕ ಸಂತೋಷ ಮಾತ್ರ ಮುಖ್ಯವೇ ಎಂದು ಕೇಳುವ “ಆರ್ಟ್ ಆಫ್ ಲೈಫ್” ಸೂರರಿಗೆ ಈ ಚಿತ್ರವೂ, ನನ್ನೀ ಲೇಖನವೂ ಸರಿ ಹೊಂದುವುದಿಲ್ಲ... ಸೊ, ನೀವೇನಾದರೂ ಆಶ್ರಮ ನಿವಾಸಿಗಳೊ (ಮಾನಸಿಕವಾಗಿಯೊ ಭೌತಿಕವಾಗಿಯೊ) ಅಥವ ಈ ಸಿನಿಮಾ ಎಂತಹ ತತ್ವವನ್ನು ಹೇಳುತ್ತದೆ ಎಂಬಂತಹ ಘನ ಪ್ರಶ್ನೆಗಳನ್ನು ಕೇಳುವಂತಹ “ಫಣಿಯಮ್ಮ”ಗಳೇನಾದರೂ ನೀವಾಗಿದ್ದಲ್ಲಿ ಈ ಲೇಖನವ ಇಲ್ಲೇ ನಿಲ್ಲಿಸಿಬಿಡಿ... ಮುಂದೆ ಓದಬೇಡಿ!  

ವ್ಯಂಗ್ಯದ ಮಾತುಗಳು ಇಲ್ಲಿ ಬೇಕಿರಲಿಲ್ಲ, ಅಂತ ನೀವಂದುಕೊಂಡರೆ ನನಗದು ಬೇಕಿದೆ! ಯಾಕೆಂದರೆ ಈ “ದಿ ಪಸ್ರ್ಯೂಟ್ ಆಫ್ ಹ್ಯಾಪಿನೆಸ್” ಸಿನಿಮಾವೂ ಕೆಲವರನ್ನು ರೇಗಿಸುವ ಕಾರಣಕ್ಕೆ! ಉತ್ತಮ ಸಮಾಜವನ್ನು ಕಟ್ಟುತ್ತಿದ್ದೇವೆ, ನೇರ ದಿಟ್ಟ ನಿರಂತರ ಸುದ್ದಿಗಳನ್ನು ನೀಡುತ್ತೇವೆ ಎಂಬಂತಹ ಸಕ್ಕರೆ ಲೇಪಿತ ಸುಳ್ಳುಗಳ ಬಿತ್ತರಿಸುವ 24/7 ಮಾಧ್ಯಮಗಳನ್ನೂ, ಅತಿರಂಜಿತ ಜಗತ್ತಿನ ನಷೆಯನ್ನು ಮಾರುತ್ತಿರುವ ವ್ಯಾಪಾರೀ ಸಿನಿಮಾಗಳನ್ನೂ ಇದು ತಣ್ಣಗೆ ಕಟಕಿಯಾಡುತ್ತಾ ವಿಮರ್ಶಿಸುತ್ತದೆ. ಇದು ನಾ ಕಂಡುಕೊಂಡ ಈ ಸಿನಿಮಾದ ಒಂದು ಓದು; 



ಕ್ರಿಸ್ ಗಾರ್ಡ್‍ನರ್ ಕೆಳ ಮಧ್ಯಮ ವರ್ಗಕ್ಕೆ ಸೇರಿದ, ಸಂತೋಷದ ಬದುಕ ಕಂಡುಕೊಳ್ಳಲು ಹೆಣಗುತ್ತಿರುವ ಒಬ್ಬ ಸೇಲ್ಸ್ ಮೇನ್. ಅವನ ಹೆಂಡತಿ ಲಿಂಡಾ ಕೂಡ ತಮ್ಮ ಸಂಸಾರ ನೆಮ್ಮದಿಯ ಹಾದಿಯ ಹಿಡಿಯಲು ಎರೆಡೆರಡು ಶಿಫ್ಟ್ ಕೆಲಸ ಮಾಡುತ್ತಿದ್ದಾಳೆ. ಇವರಿಬ್ಬರು ಆಫ್ರಿಕನ್ ಮೂಲದ ಅಮೆರಿಕನ್ನರು. ಕಪ್ಪು ಮೈಬಣ್ಣದ ಈ ಇಬ್ಬರಿಗೆ ಕ್ರಿಸ್ಟೋಫರ್ ಎಂಬ ಪ್ಲೇ ಸ್ಕೂಲ್‍ಗೆ ಹೋಗುವ ಮಗನಿದ್ದಾನೆ. ಆಸ್ಪತ್ರೆಗಳಲ್ಲಿ ಉಪಯೋಗಿಸಲ್ಪಡುವ ಸ್ಕ್ಯಾನಿಂಗ್ ಮೆಷಿನ್‍ಗಳು ತಮ್ಮ ಅದೃಷ್ಠದ ಕಾರಂಜಿಗಳು ಎಂಬ ಅತಿನಂಬಿಕೆಯಿಂದ ಈ ಉತ್ಸಾಹಿ, ಆಶಾವಾದಿ, ಎಡವಟ್ಟು ನಿರ್ಧಾರಗಳ ಆಗಾಗ ಮೈಮೇಲೆ ಎಳೆದುಕೊಳ್ಳುವ ಹೀರೊ ಕ್ರಿಸ್ ನೂರಾರು ಸ್ಕ್ಯಾನಿಂಗ್ ಮೆಷಿನ್‍ಗಳನ್ನು ಖರೀದಿಸಿ ಮನೆಯ ತುಂಬಾ ಜೋಡಿಸಿಕೊಂಡಿರುತ್ತಾನೆ. ತಾನು ಇದುವರೆವಿಗೂ ಕೂಡಿಸಿಟ್ಟಿದ್ದ ಹಣವನ್ನೆಲ್ಲ ಈ ಮೆಷಿನ್‍ಗಳ ಮೇಲೆ ಸುರಿದು ಹಣದ ಹೊಳೆಯನ್ನು ನಿರೀಕ್ಷಿಸುತ್ತಿದ್ದಾನೆ. ತಾವು ಬಾಡಿಗೆಯಿರುವ ಮನೆಯ ಮಾಲೀಕನನ್ನು ಕರೆಸಿ ತನ್ನ ಹೆಂಡತಿಯ ಜೊತೆ ಆ ಮೆಷಿನ್‍ಗಳ ಬಳಿ ನಿಂತು ಫೊಟೊ ತಗಿಸಿಕೊಳ್ಳುತ್ತಾನೆ.

ಪ್ರತಿದಿನ ಆ ನಗರದಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ತನ್ನ ಬಳಿ ಇರುವ ಸ್ಕ್ಯಾನಿಂಗ್ ಮೆಷಿನ್‍ಗಳ ಬಗ್ಗೆ ಹೇಳುತ್ತಾ ಅವುಗಳ ಮಾರಲು ಪ್ರಯತ್ನಿಸುತ್ತಿದ್ದಾನೆ. ಆದರೆ ಆಸ್ಪತ್ರೆಗಳೊ ಅಷ್ಟು ಆಸಕ್ತಿ ತೋರಿಸುತ್ತಿಲ್ಲ, ಒಂದೆರೆಡು ಮೆಷಿನ್‍ಗಳು ಮಾತ್ರ ಮಾರಾಟ ಆಗಿವೆ. ಕ್ರಿಸ್‍ನ ಜೇಬು ಖಾಲಿಯಾಗುತ್ತಿದೆ. ಈ ಮಧ್ಯೆ ಪ್ರತಿಷ್ಠಿತ ಸ್ಟಾಕ್ ಬ್ರೋಕರ್ ಕಂಪೆನಿಯೊಂದರ ಬಳಿ ಅಕಸ್ಮಾತ್ ಆಗಿ ಹೋಗುವ ಅವನು ಒಂದು ಅತಿ ದುಬಾರಿ ಕಾರ್ ನ್ನು ನೋಡುತ್ತಾನೆ. ಅದರೊಳಗಿಂದ ಇಳಿದು ಬರುವ ವ್ಯಕ್ತಿಯನ್ನು ಕೇಳುತ್ತಾನೆ: ನೀ ಏನ್ ಕೆಲಸ ಮಾಡ್ತಿದ್ದೀ ಗುರು? ಇಷ್ಟು ಕಾಸ್ಟ್ಲಿ ಕಾರ್ ಇಟ್ಕೊಂಡಿದ್ದೀಯಲ್ಲ? ... ಆತ ನಗುತ್ತಾ ತಾನೊಬ್ಬ ಸ್ಟಾಕ್ ಬ್ರೋಕರ್ ಎನ್ನುತ್ತಾನೆ. ಇಲ್ಲಿಂದ ಸಿನಿಮಾದ ಎರಡನೆಯ ಪ್ಲಾಟ್ ಪಾಯಿಂಟ್ ಶುರುವಾಗುತ್ತದೆ. ಕ್ರಿಸ್ ಸ್ಟಾಕ್ ಬ್ರೋಕರ್ ಆಗುವ ಮಹಾ-ಕನಸಿನ ಹಿಂದೆ ಓಡಲಾರಂಭಿಸುತ್ತಾನೆ.


ಸ್ಟಾಕ್ ಬ್ರೋಕರ್ ಆಗಲು ಮೊದಲು ಅದರ ‘ಎಬಿಸಿಡಿ’ ಗೊತ್ತಾಗಬೇಕು. ಪ್ರತಿಷ್ಠಿತ ಸ್ಟಾಕ್ ಬ್ರೋಕರ್ ಕಂಪೆನಿಯೊಂದು ಅಪ್ರೆಂಟಿಶಿಪ್‍ಗಾಗಿ ಕರೆ ನೀಡಿರುವುದು ಕ್ರಿಸ್‍ಗೆ ಗೊತ್ತಾಗುತ್ತದೆ. 200 ಜನರನ್ನು ಅಪ್ರೆಂಟಿಶಿಪ್‍ಗಾಗಿ ಸಂರ್ದಶನದ ಮೂಲಕ ಆಯ್ಕೆ ಮಾಡಿಕೊಂಡು ಅವರಲ್ಲಿ ಉತ್ತಮವಾಗಿ ಕೆಲಸ ಮಾಡುವ ಹತ್ತು ಮಂದಿಯನ್ನು (ಹತ್ತೇ ಇರಬೇಕು ಅಂದ್ಕೋತೀನಿ) ಆ ಕಂಪೆನಿಯಲ್ಲಿ ಖಾಯಂ ಮಾಡಿಕೊಳ್ಳಲಾಗುತ್ತದೆ ಎನ್ನುವ ಸುದ್ದಿಗೆ ಕ್ರಿಸ್ ತನ್ನ ಮೈಮನವನ್ನೆಲ್ಲ ಅಡ ಇಡುತ್ತಾನೆ. ಇವನ ಈ ತೀರ್ಮಾನಕ್ಕೆ ನಗುವ, ಅವಮಾನಿಸುವ ಅವನ ಮಡದಿ ಲಿಂಡಾ ಅವನ ಹುಚ್ಚಾಟವನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ಅವನ ತೊರೆಯುತ್ತಾಳೆ. ಆದರೆ ಮಗನನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಬಯಸುತ್ತಾಳೆ, ಆದರೆ ಕ್ರಿಸ್ ಅದನ್ನು ಒಪ್ಪುವುದಿಲ್ಲ; ತನ್ನ ಹಾಗೆ ತನ್ನ ಮಗನೂ ತಂದೆಯಿಲ್ಲದಂತೆ ಬೆಳೆಯಬಾರದು ಎಂಬ ನಿರ್ಧಾರವನ್ನು ಅವನು ಬಿಡಲೊಪ್ಪುವುದಿಲ್ಲ. ಕೊನೆಗೆ ಲಿಂಡಾ ಹೊಸ ಅವಕಾಶಗಳ ಹುಡುಕಿಕೊಂಡು ಗಂಡ-ಮಗನನ್ನು ತೊರೆದು ನ್ಯೂಯಾರ್ಕ್‍ಗೆ ಹೊರಡುವ ತೀರ್ಮಾನ ತಗೆದು ಕೊಳ್ಳುತ್ತಾಳೆ.

ಮಗನನ್ನು ಪ್ಲೇ ಸ್ಕೂಲ್‍ಗೆ ಬಿಟ್ಟು ತನ್ನ ಸ್ಕ್ಯಾನಿಂಗ್ ಮೆಷಿನ್‍ಗಳ ಮಾರುವ ಪ್ರಯತ್ನವನ್ನು ಮುಂದುವರೆಸುತ್ತಾ ತನ್ನ ಹೊಸ ಕನಸಿನ ಗಳಿಗೆಗಾಗಿ ಕಾಯುತ್ತಿದ್ದಾನೆ. ಇತ್ತ ಮೂರ್ನಾಲ್ಕು ತಿಂಗಳುಗಳಿಂದ ಬಾಡಿಗೆ ಕೊಡದ ಕಾರಣ ಮನೆಯ ಓನರ್ ಒಂದು ವಾರದ ಗಡುವು ನೀಡಿದ್ದಾನೆ. ಸರ್ಕಾರಕ್ಕೆ ಕಟ್ಟಬೇಕಾಗಿರುವ ತೆರಿಗೆಯನ್ನೂ ಆರು ತಿಂಗಳಿಂದ ಕಟ್ಟಿಲ್ಲ... ಅವನ ಕಾರನ್ನು ಟ್ರಾಫಿಕ್‍ನವರು ಎತ್ತಿಕೊಂಡು ಹೋಗಿದ್ದಾರೆ. ಮನೆಗೆ ಪೈಂಟ್ ಮಾಡಬೇಕು ಎಂದು ಹೇಳಿಕೊಳ್ಳುತ್ತಾ ಮನೆಯ ಓನರ್ ಕ್ರಿಸ್‍ನನ್ನು ಹೊರ ದಬ್ಬಲು ಯೋಜಿಸಿದ್ದಾನೆ. ಮನೆಗೆ ತಾನೇ ಬಣ್ಣ ಬಳಿಯುತ್ತೇನೆ ಎಂದು ಕೇಳಿಕೊಂಡು ಕ್ರಿಸ್ ಮನೆಗೆ ಪೈಂಟ್ ಹೊಡೆಯಲು ಶುರು ಮಾಡುತ್ತಾನೆ. ಮರು ದಿನ ಅಪ್ರೆಂಟಿಶಿಪ್‍ಗಾಗಿ ಆ ಪ್ರತಿಷ್ಠಿತ ಸ್ಟಾಕ್ ಬ್ರೋಕರ್ ಕಂಪೆನಿಯ ಇಂಟರ್ ವ್ಯೂ! ಪೈಂಟ್ ಮಾಡುತ್ತಿರುವಾಗ ಪೊಲೀಸರು ಅವನ ಮನೆಯ ಬಾಗಿಲು ತಟ್ಟುತ್ತಾರೆ.



ಇಷ್ಟರಲ್ಲೇ ತೆರಿಗೆ ಕಟ್ಟುತ್ತೇನೆ, ಕಾರನ್ನೂ ಬಿಡಿಸಿಕೊಳ್ಳುತ್ತೇನೆ ಎಂದು ಎಷ್ಟು ಸಾರಿ ಹೇಳಿದರೂ ಅವರು ಒಪ್ಪಿಕೊಳ್ಳಲು ತಯಾರಿಲ್ಲ. ಅವನನ್ನು ಒಂದು ರಾತ್ರಿಯ ಮಟ್ಟಿಗೆ ಬಂಧಿಸಿ ಜೈಲಿನಲ್ಲಿ ಕೂರಿಸಲಾಗುತ್ತದೆ. ಮಗನನ್ನು ಪ್ಲೇ ಸ್ಕೂಲಿನಿಂದ ಮನೆಗೆ ಕರೆದುಕೊಂಡು ಬರಬೇಕು, ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಬೇಡಿಕೊಂಡರೂ ಪ್ರಯೋಜನವಿಲ್ಲ... ಕೊನೆಗೆ ನ್ಯೂಯಾರ್ಕಿಗೆ ಇನ್ನೂ ಹೋಗಿರದ ತನ್ನ ಹೆಂಡತಿ ಲಿಂಡಾಳಿಗೆ ಫೋನಾಯಿಸಿ ಮಗನನ್ನು ಒಂದು ರಾತ್ರಿಯ ಮಟ್ಟಿಗೆ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ತಾನೀಗ ಎಲ್ಲಿ ಇರುವುದೆಂದು ಹೇಳದೆ ಆಕೆಯ ಬೇಡಿಕೊಳ್ಳುತ್ತಾನೆ.

ರಾತ್ರಿ ಪೂರಾ ಜೈಲಿನಲ್ಲೇ ಕಳೆದು ಬೆಳಿಗ್ಗೆ 9 ಘಂಟೆಗೆ ಬಿಡುಗಡೆಗೊಂಡು ಸಂದರ್ಶನಕ್ಕಾಗಿ ಅಲ್ಲಿಂದ ನೇರವಾಗಿ ಓಡುತ್ತಾನೆ. ಅದೇ ಪೈಂಟ್ ಮೆತ್ತಿದ ಶರ್ಟ್, ಕಿತ್ತು ಹೋದ ಪ್ಯಾಂಟ್, ಬಟನ್‍ಗಳಿಲ್ಲದ ತೋಳುಗಳು... ಪ್ರತಿಷ್ಠಿತ ಕಂಪೆನಿಯ ಮೆಟ್ಟಿಲುಗಳೂ ಅವನ ನೋಡಿ ನಗುತ್ತವೆ, ಲಿಫ್ಟ್‍ನ ಲೋಹಗಳೂ ಮೂಗು ಮುಚ್ಚಿಕೊಳ್ಳುತ್ತವೆ. ಸುತ್ತಲೂ ಸೂಟು ಬೂಟು ಹಾಕಿದ ಸಭ್ಯ ವ್ಯಕ್ತಿಗಳು, ಇಂಟರ್ ವ್ಯೂ ಎದುರಿಸಲು ಸಜ್ಜಾಗಿ ಕೂತಿರುವ ವೆಲ್ ಮ್ಯಾನರ್ಡ್ ಅಪ್ಲಿಕೆಂಟ್ಸ್... ಹೀಗಿದ್ದರೂ ಧೃತಿಗೆಡೆದ ಕ್ರಿಸ್ ಸಂದರ್ಶನಕ್ಕಾಗಿ ಅವನನ್ನು ಕರೆದಾಗ ಆತ್ಮವಿಶ್ವಾಸದಿಂದ ಎದ್ದು ಹೋಗುತ್ತಾನೆ. ತಾನು ಹೀಗೆ ಬರಲು ಕಾರಣವಾದ ಘಟನೆಯನ್ನು ಯಾವುದೇ ಸುಳ್ಳುಗಳಿಲ್ಲದೆ ವಿವರಿಸಿ ಕೂರುತ್ತಾನೆ. ಸಂದರ್ಶನ ನಡೆಸಲು ಕೂತಿರುವ ವ್ಯಕ್ತಿಗಳಲ್ಲಿ ಒಬ್ಬನಿಗೆ ಈಗಾಗಲೇ ಕ್ರಿಸ್‍ನ ಬುದ್ಧಿವಂತಿಕೆ, ಚಾಕಚಕ್ಯತೆ ಗೊತ್ತಿದೆ. ಕ್ರಿಸ್‍ಗೆ ಒಂದು ಅವಕಾಶ ಕೊಡುವ ಎಂದು ತೀರ್ಮಾನಿಸುವ ಆ ಪ್ಯಾನಲ್ಲನ್ನೇ ಅಚ್ಚರಿಗೊಳಿಸುವಂತೆ ಕ್ರಿಸ್ ಉತ್ತರಿಸಿ ಎದ್ದು ಬರುತ್ತಾನೆ. ಅವನು ಆಯ್ಕೆಯಾಗುವುದು ಬಹುತೇಖ ಖಚಿತವಾದಂತಿದೆ, ಆದರೀಗ ಕ್ರಿಸ್‍ಗೆ ಮಗದೊಂದು ಸಮಸ್ಯೆ ಅಟ್ಟಾಯಿಸಿಕೊಳ್ಳುತ್ತದೆ.

ಈ ಅಪ್ರೆಂಟಿಶಿಪ್ ಪೀರಿಯಡ್‍ಗೆ ಸಂಬಳವಿಲ್ಲ! 200 ಜನರಲ್ಲಿ ಹತ್ತು ಮಂದಿಯನ್ನು ಆರಿಸಿಕೊಂಡು ಅವರಿಗೆ ಖಾಯಂ ನೌಕರಿ ಕೊಡುವ ಭರವಸೆ ಮಾತ್ರ ಇದೆ! ಕ್ರಿಸ್ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ.

ಅತ್ತ ತನ್ನ ಬಹು ಆಸೆಯಿಂದ ಕೊಂಡುಕೊಂಡ ಸ್ಕ್ಯಾನಿಂಗ್ ಮೆಷಿನ್‍ಗಳೂ ಬಿಕರಿಯಾಗುತ್ತಿಲ್ಲ... ಬದುಕನ್ನು ನಡೆಸಲು, ಮಗನನ್ನು ಸಂತೋಷವಾಗಿ ಬೆಳೆಸಲು ಬೇರೆ ಯಾವ ಆಯ್ಕೆಯೂ ಕಾಣುತ್ತಿಲ್ಲ... ಮನೆಯಿಂದ ಅವನನ್ನು ಸಾಮಾನುಗಳ ಸಮೇತ ಹೊರದಬ್ಬಲಾಗಿದೆ. ಬೇರೊಂದು ಕಡಿಮೆ ಬಾಡಿಗೆಯ ಮನೆಗೆ ಹೋದರೂ ಅಲ್ಲೂ ಅದೇ ಸಮಸ್ಯೆ... ಅಲ್ಲಿಂದಲೂ ಅವನನ್ನು ಹೊರದಬ್ಬಲಾಗುತ್ತದೆ. ಹೀಗಿದ್ದರೂ ಕ್ರಿಸ್ ಛಲದಲ್ಲಿ ಸ್ಟಾಕ್ ಬ್ರೋಕರ್ ಅಪ್ರೆಂಟಿಶಿಪ್ ಟ್ರೈನಿಂಗ್‍ಗೆ ಸೇರಿಕೊಳ್ಳುತ್ತಾನೆ. ರಾತ್ರಿಯೆಲ್ಲ ಮೆಟ್ರೊ ಸ್ಟೇಷನ್, ಅನಾಥಾಲಯ ಎಂದು ಕಾಲ ನೂಕುತ್ತಾ ತನ್ನ ಛಲವನ್ನು ಅವನು ಬಿಡುವುದಿಲ್ಲ. ಮೆಟ್ರೊ ಸ್ಟೇಷನ್‍ನ ಟಾಯ್ಲೆಟ್‍ನಲ್ಲೂ ಮಗನ ನಿದ್ರೆ ಮಾಡಿಸಿ ಅಳುತ್ತಾ ಗಟ್ಟಿಯಾಗುತ್ತಾನೆ (ಈ ದೃಶ್ಯದ ವಿಶೇಷತೆಯನ್ನು ಈ ಲೇಖನದ ಕೊನೆಯಲ್ಲಿ ನೀವು ಕಾಣಬಹುದು).


ಎದುರಾಗುವ ಅಡೆತಡೆ- ಕಷ್ಟ, ಅವಮಾನ-ಕೀಟಲೆಗಳನ್ನೆಲ್ಲ ನುಂಗಿಕೊಳ್ಳುತ್ತಾ ಅಪರಿಮಿತ ಮನಃಸ್ಥೈರ್ಯ ಮತ್ತು ಬುದ್ಧಿವಂತಿಕೆಯಿಂದ ಓಡುತ್ತಲೇ ಇರುತ್ತಾನೆ. ಅವನ ಸ್ಕ್ಯಾನಿಂಗ್ ಮೆಷಿನ್‍ಗಳನ್ನು ಕದ್ದು ಕೊಂಡು ಹೋಗುವ ಜಿಪ್ಸಿಗಳ ಹಿಂದೆ ಓಡುತ್ತಾ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡ ವ್ಯಕ್ತಿಯೊಬ್ಬನಿಂದಲೂ ತನ್ನ ಮೆಷಿನ್‍ನ್ನು ಕಿತ್ತುಕೊಳ್ಳುತ್ತಲೇ, ಟ್ರೈನಿಂಗ್‍ನಲ್ಲಿ ಆಗುವ ತೊಡರುಗಳನ್ನು ಗಟ್ಟಿ ಮನಸ್ಸಿನಿಂದ ಎದುರಿಸುತ್ತಾ, ಪ್ರತಿರಾತ್ರಿ ಮಗನನ್ನು ನೆಮ್ಮದಿಯಾಗಿ ಮಲಗಿಸಲು ಹೊಸ ತಾಣಗಳ ಹುಡುಕುತ್ತಾ ಕ್ರಿಸ್ ತನ್ನ ಬದುಕಲ್ಲಿ ಸಂತೋಷ-ನೆಮ್ಮದಿಗಳ ಕಂಡುಕೊಂಡನೇ ಎಂಬುದೇ ಈ ಸಿನಿಮಾದ ಕ್ಲೈಮಾಕ್ಸ್.  

ಈ ಸಿನಿಮಾ ನಿಜ ಜೀವನವನ್ನಾಧರಿಸಿದ ಕತೆ. ಕ್ರಿಸ್ ಗಾರ್ಡ್‍ನರ್ ಎಂಬ ವ್ಯಕ್ತಿಯ ಜೀವನದಲ್ಲಿ ನಡೆದ ಕತೆ. ನಿರ್ಗತಿಕನಾಗಿ ನಡುಗುತ್ತಿದ್ದ ಆತ ತನ್ನ ಬಿಡದ ಛಲದಿಂದ ಕೋಟ್ಯಾಧಿಪತಿಯಾಗಿ ತನ್ನ ಬದುಕಿನ ನಡೆಯನ್ನು ಪುಸ್ತಕ ರೂಪದಲ್ಲಿ ಹೊರತಂದ. ಆ ಪುಸ್ತಕವನ್ನು ಆಧರಿಸಿಯೇ ಈ ಸಿನಿಮಾವನ್ನು ರೂಪಿಸಲಾಯಿತು. ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಗಳಿಕೆಯನ್ನು ತನ್ನದಾಗಿಸಿಕೊಂಡ ಈ ಸಿನಿಮಾ ಇಂದಿಗೂ ಹಾಲಿವುಡ್‍ನ ಅತಿ ಪ್ರಭಾವಿ ಸಿನಿಮಾಗಳಲ್ಲಿ ಒಂದಾಗಿ ಉಳಿದಿದೆ. ಈ ಸಿನಿಮಾವನ್ನು ನಿರ್ಮಿಸಿ ಕ್ರಿಸ್ ಗಾರ್ಡ್‍ನರ್ ಆಗೇ ನಟಿಸಿದ ವಿಲ್ ಸ್ಮಿತ್ ತನ್ನ ಕೆರಿಯರ್‍ನಲ್ಲೇ ಬೆಸ್ಟ್ ಎನ್ನಬಹುದಾದ ನಟನೆಯನ್ನು ನೀಡಿದ್ದಾನೆ ಎಂದೇ ವಿಮರ್ಶಕರು ಗುರುತಿಸುತ್ತಾರೆ. ತನ್ನ ಮಗನನ್ನೇ ಈ ಚಿತ್ರದಲ್ಲಿ ಹಾಕಿಕೊಂಡು ಅಪ್ಪ-ಮಗ ಇಬ್ಬರೂ ತೆರೆಯಲ್ಲೂ ಅಪ್ಪ-ಮಗನಾಗಿ ನಟಿಸಿ ನೋಡುಗರ ಸುಸ್ತುಗೊಳಿಸಿದರು. ಇನ್ನು ಈ ಸಿನಿಮಾದ ನಿರ್ದೇಶಕ... ಗೇಬ್ರಿಲ್ ಮುಸಿನೊ... ಇಟಲಿ ದೇಶಕ್ಕೆ ಸೇರಿದ ಈತನಿಗಿದು ಮೊದಲ ಹಾಲಿವುಡ್ ಸಿನಿಮಾ!  


ಇಷ್ಟು ಈ ಸಿನಿಮಾದ ಸಾಮಾನ್ಯ ನೋಟಗಳು. ಇನ್ನು ನನ್ನ ವೈಯುಕ್ತಿಕ ನೋಟಗಳು:


 ಈ ಸಿನಿಮಾದ ಬಗೆಗಿನ ನನ್ನ ಒಳನೋಟಗಳು ನಿಮಗೆ ಮುಖ್ಯ ಅನ್ನಿಸಿದರೆ  ಇದೇ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಅಥವ ಆಗಸ್ಟ್ ಎರಡನೆಯ ವಾರದಲ್ಲಿ ಬರಲಿರುವ ಸಿನಿಮಾ ಕುರಿತಾದ 120 ರೂ ಬೆಲೆಯ ನನ್ನ ಪುಸ್ತಕವನ್ನು ಕೊಂಡು ಓದಬೇಕಾಗಿ ವಿನಂತಿ ...

ಕೊನೆಯಲ್ಲಿ ಕೆಳಗಿರುವುದನ್ನೂ ಓದಿಕೊಳ್ಳಿ... ಈ ಲೇಖನವ ಶುರು ಮಾಡುವಾಗ ಬರೆದಿದ್ದು... ಈ ಲೇಖನದಲ್ಲಿ ಎಲ್ಲೂ ಸೇರಿಸಲಾಗದೆ ಬಿಟ್ಟದ್ದು... ಸುಮ್ಮನೆ ಓದಿಕೊಳ್ಳಿ:  

ಸಿನಿಮಾವೊಂದಕ್ಕೆ ವ್ಯಕ್ತಿಯೊಬ್ಬನ ವೈಯುಕ್ತಿಕ ತಾಕಲಾಟಗಳ ಜೊತೆ ಸಾಮಾಜಿಕ ಸ್ತರಗಳ ಚರ್ಚಿಸುವ ಕಲಾತ್ಮಕ ಅಂಶಗಳು ಮುಖ್ಯವಾಗುತ್ತವೆಯೊ ಅಥವ ಮನುಷ್ಯ ಭಾವನೆಗಳನ್ನು ಮತ್ತು ಸಮಾಜವನ್ನು ಮೇಲ್ಪದರಲ್ಲಿ ತೋರಿಸುವ ವ್ಯಾಪಾರೀ ಅಂಶಗಳು ಮುಖ್ಯವಾಗುತ್ತವೆಯೇ? ಅಥವ ಈ ಎರಡನ್ನೂ ಹದವಾಗಿ ಬೆರೆಸಿಕೊಂಡು ಹೊಸ ಅರ್ಥಗಳ ಸ್ಫುರಿಸುವ ಸಿನಿಮಾಗಳ ‘ಇಂಡಿಪೆಂಡೆಂಟ್’ ಅಂಶಗಳು ಮುಖ್ಯವಾಗುತ್ತವೆಯೇ?

ಕುರಸೊವ, ಟಾರ್ಕೊವಸ್ಕಿ, ಬೆಲ ತಾರ್, ಬ್ರೆಸಾನೊರಂತಹ ಮಾಸ್ಟರ್ ನಿರ್ದೇಶಕರ ಸಿನಿಮಾಗಳಿಗೂ ಟರಾಂಟಿನೊ, ಸ್ಕಾರ್ಸೆಸಿ, ಗಾಸ್ಪರ್ ನೊ ಮುಂತಾದವರ ಸಿನಿಮಾಗಳಿಗೂ ಇರುವ ವ್ಯತ್ಯಾಸಗಳು...







Comments