Cache ಎಂಬ ನವ್ಯೋತ್ತರ ಸಿನಿಮಾ


(ಮಯೂರದಲ್ಲಿ  ಈಗಾಗಲೇ ಪ್ರಕಟಗೊಂಡಿರುವ ನನ್ನೀ ಲೇಖನ ಮತ್ತಷ್ಟು ಜನರ ತಲುಪಲಿ ಎಂದು ... ನನ್ನೀ ಬ್ಲಾಗ್ ನಲ್ಲಿ ..)




   
ಜಗತ್ತಿನ ಅತಿ ಶ್ರೇಷ್ಠ ಸಿನಿಮಾ ನಿರ್ದೇಶಕರುಗಳು ಎಂದು ಗುರುತಿಸಲ್ಪಡುವ ರಾಬರ್ಟ್ ಬ್ರೆಸಾನ್, ಟಾರ್ಕೊವಸ್ಕಿ, ಕುರಸೊವಾ, ಅಬ್ಬಾಸ್ ಕರ್ತಸೊಮಿಯವರ ಆಳ ಪ್ರಭಾವದಲ್ಲಿ ಅರಳಿದ ಈ ನಿರ್ದೇಶಕ ಸಮಕಾಲೀನ ಸಿನಿಮಾ ಜಗತ್ತಿನ ಬಹುಮುಖ್ಯ ಅಂಗ; ಯುರೋಪ್ ಕಲಾತ್ಮಕ ಸಿನಿಮಾಗಳ ಭವ್ಯ ಇತಿಹಾಸವನ್ನು ಮುಂದುವರೆಸುತ್ತಿರುವ ಈತನ ಹೆಸರು ಮೈಖೇಲ್ ಹನೆಕೆ. ಹುಟ್ಟಿದ್ದು ಆಸ್ಟ್ರಿಯಾದಲ್ಲಾದರೂ ತನ್ನ ಸೃಜನಶೀಲ ಬೇರುಗಳನ್ನು ಈತ ಹರಡಿಕೊಂಡಿರುವುದು ಫ್ರಾನ್ಸ್‍ನಲ್ಲಿ; ಫ್ರೆಂಚ್, ಜರ್ಮನ್, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಲನಚಿತ್ರಗಳ ನಿರ್ದೇಶಿಸುತ್ತಿರುವ ಹನೆಕೆ ನಮ್ಮ ಕಾಲದ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲೊಬ್ಬ ಎಂದೇ ಹಲವು ಸಿನಿಮಾ ತಙ್ಞರು ಗುರುತಿಸುತ್ತಾರೆ.  

ಸಮಾಜ ಮತ್ತದರ ವಿನ್ಯಾಸಗಳನ್ನು ಪ್ರಶ್ನಿಸುವ ಮತ್ತು ಜೀವಪರ ಸಮಾಜಕ್ಕಾಗಿ ಹಾತೊರೆವ ಬಹುತೇಖ ಕಲಾತ್ಮಕ ಸಿನಿಮಾಗಳಂತೆ ಹನೆಕೆಯ ಸಿನಿಮಾಗಳೂ ಸಾಗಿದರೂ ಆತನ ಧಾಟಿ ಎಲ್ಲರಿಗಿಂತಲೂ ಭಿನ್ನವಾದುದು. ಈತನ ಚಲನಚಿತ್ರಗಳು ವರ್ತಮಾನದ ತೊಡಕುಗಳನ್ನು ತೊಡಕುಗಳಾಗಿಯೇ ಪರದೆಯಲ್ಲಿ ಬಿಟ್ಟುಬಿಡುತ್ತವೆ, ಯಾವುದೇ ಉತ್ತರಗಳನ್ನೊ ಅಂತ್ಯಗಳನ್ನೊ ಕೊಡಲು ಹೋಗುವುದಿಲ್ಲ. ಆ ಮುಖೇನ ನೋಡುಗರನ್ನು ಕ್ರಿಯಾಶೀಲಗೊಳಿಸಿ ಹೊಸ ಸಿನಿಮಾದ ಮುನ್ನುಡಿ ಬರೆಯುತ್ತವೆ. ಸಿನಿಮಾ ಎಂಬುದು ಈತನಲ್ಲಿ ಕೇವಲ ಸಿನಿಮಾವಾಗದೆ ಅದೊಂದು ನೋಡುಗರ ಜೊತೆಗಿನ ಚರ್ಚೆ, ಸಂವಾದಗಳಾಗುತ್ತವೆ. ಹನೆಕೆಯ ಸಿನಿಮಾಗಳಲ್ಲಿನ ಚಿಮ್ಮುವ ರಕ್ತ, ಕೊಲ್ಲಲ್ಪಡುವ ಪ್ರಾಣಿಗಳು, ಹಸಿಹಸಿ, ದೀರ್ಘ ದೃಶ್ಯಗಳು ಕೆಲವರನ್ನು ಬೆಚ್ಚಿಬೀಳಿಸುತ್ತವೆ; ಸಿನಿಮಾ/ ಸಾಹಿತ್ಯಗಳಲ್ಲಿ ನೀತಿ ಪಾಠ/ ನೈತಿಕತೆಗಳ ಹುಡುಕುವ ‘ನೀತಿವ್ಯಾಧಿ’ಗಳು ಈತನ ಸಿನಿಮಾಗಳ ನೋಡಲಾಗದೆ ಎದ್ದು ಹೋದದ್ದೂ ಇದೆ; ಕೆಲವರನ್ನು ತೀವ್ರ ಚಿಂತನೆಗೆ ಹಚ್ಚಿಸಿದ ಉದಾಹರಣೆಗಳೂ ಇವೆ. ಈತನ ಸಿನಿಮಾಗಳಲ್ಲಿ ಗಾಢವಾಗಿರುವ ಹಿಂಸೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಬೇರೆಯದೇ ಆದ ಸಿದ್ಧತೆ ಬೇಕು.


ಆಸ್ಕರ್ ಒಳಗೊಂಡಂತೆ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಹನೆಕೆಯ ಸಿನಿಮಾಗಳು ಅಸಾಧ್ಯ ಮೌನ ಮತ್ತು ದೀರ್ಘ ದೃಶ್ಯಗಳನ್ನು ಹೊಂದಿರುವಂತಹವು. ವಿವಿಧ ನೋಡುಗರ ವಿವಿಧ ನೋಟಗಳಿಗೆ ಅವಕಾಶ ನೀಡುವ ಈತನ ಚಲನಚಿತ್ರಗಳು ಹಲವು ಅರ್ಥಸಾಧ್ಯತೆಗಳ ಹೊಂದಿರುವ ರಕ್ತಕಾವ್ಯ! ರಕ್ತ-ಹಿಂಸೆಗಳ ಆಳಕ್ಕಿಳಿದು ಮನಸ್ಸಿನ ಮೇಲ್ಪದರನ್ನು ಅಲುಗಾಡಿಸುವ ಹನೆಕೆ ನಿನ್ನೆನಾಳೆಗಳ ರಕ್ತನಾಳಗಳನ್ನು ಒಡೆದುಹಾಕುತ್ತಾನೆ. ಹಾಗೆ ಒಡೆದುಹಾಕಿದ ಒಂದು ಕಾವ್ಯವೇ ಕೆಚೆó (Cache). 2005 ರ ಕೇನ್ಸ್ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಹನೆಕೆಗೆ ‘ಉತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ತಂದುಕೊಟ್ಟಿತು. ಸಮಕಾಲೀನ ಸಿನಿಮಾ ಜಗತ್ತಿನಲ್ಲಿ ಈತನನ್ನು ಪ್ರಮುಖ ನಿರ್ದೇಶಕನನ್ನಾಗಿಸಿದ ಚಿತ್ರವೂ ಇದುವೇ!

ಕೆಚೆó ಶುರುವಾಗುವುದೇ ಒಂದು ದೀರ್ಘ ದೃಶ್ಯದಿಂದ. ಐದು ನಿಮಿಷಾವಧಿಯ ಒಂದೇ ವೈಡ್ ಶಾಟ್! ಅತ್ತಿತ್ತ ಸಾಗದೆ ನಿಶ್ಚಲವಾಗಿರುವ ಕ್ಯಾಮೆರಾ! ಹಿನ್ನೆಲೆ ಸಂಗೀತವೂ ಇರದ ‘ನಿರ್ಜೀವ ಶಾಟ್’! ಚಣ ಕಳೆದು ಯಾವುದೇ ಅಬ್ಬರವಿಲ್ಲದೆ ಚಿತ್ರದ ಟೈಟಲ್ ಕಾಡ್ರ್ಸ್ ಫೊಟೊದಂತೆ ಕಾಣುತ್ತಿರುವ ಆ ದೃಶ್ಯದ ಮೇಲೆ ಟೈಪ್ ಆಗುತ್ತದೆ. ನಗರದಲ್ಲಿನ ಮೇಲ್ ಮಧ್ಯಮ ವರ್ಗದ ಬಡಾವಣೆಯೊಂದರ ಮನೆಯೊಂದನ್ನು ಕೇಂದ್ರೀಕರಿಸಿರುವ ಆ ದೃಶ್ಯದಲ್ಲಿ ಆಗಾಗ ಕಾರುಗಳು ಹಾದು ಹೋಗುತ್ತವೆ, ಮನುಷ್ಯರು ನಡೆದಾಡುತ್ತಾರೆ; ಮೆಲ್ಲಗೆ ಹಿನ್ನೆಲೆಯಲ್ಲಿ ಒಂದು ಗಂಡು, ಒಂದು ಹೆಣ್ಣು ಮಾತನಾಡುತ್ತಿರುವುದು ಕೇಳಿಸತೊಡಗುತ್ತದೆ. ‘ಇರು, ಇರು… ನಾನೂ ಬಂದೀದೀನಿ... !’ ಎಂಬ ಮಾತು ನಮಗೆ ಕೇಳಿಸುವಾಗ ನಮಗೆ ಕಾಣುತ್ತಿರುವ ದೃಶ್ಯ ‘ರಿವೈಂಡ್’ ಆಗುತ್ತದೆ. ಆಗಲೇ ನಮಗೆ ಗೊತ್ತಾಗುವುದು ನಾವು ನೋಡುತ್ತಿರುವ ಆ ದೀರ್ಘ ದೃಶ್ಯ ಟಿ.ವಿಯಲ್ಲಿ ಕಾಣಿಸುತ್ತಿರುವ ಒಂದು ವಿಡಿಯೋ ಕ್ಯಾಸೆಟ್‍ನ ದೃಶ್ಯ ಎಂಬುದು. ತಮ್ಮ ಮನೆಯನ್ನು ಯಾರೋ ದೂರದಲ್ಲಿ ನಿಂತು ವಿಡಿಯೊ ಮಾಡಿ ಕಳುಹಿಸಿರುವುದು ಯಾಕಾಗಿ ಎಂದು ಗೊತ್ತಾಗದೆ ಜಾರ್ಜ್ ಮತ್ತವನ ಮಡದಿ ಆನ್ನಿ 
(Annie)  ಇಬ್ಬರೂ ಕಳವಳಕ್ಕೀಡಾಗಿದ್ದಾರೆ. ತಮ್ಮನ್ಯಾರೊ ಹಿಂಬಾಲಿಸುತ್ತಿದ್ದಾರೆ ಎಂದುಕೊಂಡು ಆತಂಕಕ್ಕೊಳಗಾಗಿದ್ದಾರೆ.

ಟ್ರೈಲರ್  - Trailer: 

                                               


ಟಿ.ವಿ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ (ಟಾಕ್ ಶೋ ನಿರೂಪಕ) ಜಾರ್ಜ್ ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆನ್ನಿ ಇಬ್ಬರಿಗೆ 12 ವರ್ಷ ವಯಸ್ಸಿನ ಪಿಯೊ ಎಂಬ ಹೆಸರಿನ ಮಗನಿದ್ದಾನೆ; ಆತ ಈಜು ಕಲಿಯುತ್ತಿದ್ದಾನೆ. ಒಟ್ಟಿನಲ್ಲಿ ಜಾರ್ಜ್ ಮತ್ತು ಆನ್ನಿ ಸುಖೀ ಜೀವನವನ್ನು ನಡೆಸುತ್ತಿರುವಂತೆಯೇ ಕಾಣುತ್ತದೆ, ಆ ವಿಡಿಯೊ ಕ್ಯಾಸೆಟ್ ಬರುವವರೆಗೂ. ತಮ್ಮ ಮನೆಯ ಗೇಟ್‍ನಲ್ಲಿ ಯಾರೋ ಇಟ್ಟು ಹೋಗುತ್ತಿರುವ ವಿಡಿಯೊ ಕ್ಯಾಸೆಟ್ ಅವರ ತಣ್ಣಗಿನ ಬದುಕನ್ನು ಕದಡುತ್ತದೆ. ಸ್ವಲ್ಪ ದಿನಗಳಲ್ಲೇ ಎರಡನೆಯ ವಿಡಿಯೊ ಕ್ಯಾಸೆಟ್ ಬರುತ್ತದೆ; ಆದರೆ ಈ ಬಾರಿ ಒಂದು ವಿಶೇಷ, ಕ್ಯಾಸೆಟ್ ಜೊತೆ ಕೈಯಲ್ಲಿ ಬಿಡಿಸಿರುವಂತಹ ಒಂದು ಚಿತ್ರ (ಡ್ರಾಯಿಂಗ್) ಇಟ್ಟು ಹೋಗಿದ್ದಾರೆ. ಆ ಡ್ರಾಯಿಂಗ್ ನೋಡಿದ್ದೇ ಆನ್ನಿ ಮತ್ತಷ್ಟು ಕಳವಳಕ್ಕೀಡಾಗುತ್ತಾಳೆ. ರಕ್ತವನ್ನು ಉಗುಳುತ್ತಿರುವ ಮಗುವೊಂದರ ಡ್ರಾಯಿಂಗ್ ಅದು. 

ಜಾರ್ಜ್ ಈ ಚಿತ್ರವನ್ನು ನೋಡಿ ತಮ್ಮ ಮಗನ ಸ್ನೇಹಿತರ್ಯಾರೊ ಈ ಕೆಲಸವನ್ನು ಮಾಡುತ್ತಿರಬೇಕು, ಅವನನ್ನು ಕೇಳುವ ಎನ್ನುತ್ತಾನೆ. ಆದರೆ ಆನ್ನಿ ಈ ಮಾತನ್ನು ಒಪ್ಪುವುದಿಲ್ಲ, ಮತ್ತು ಮಗನನ್ನು ಈ ಕುರಿತು ಕೇಳುವುದು ಬೇಡ ಎನ್ನುತ್ತಾಳೆ. ಈ ನಡುವೆ ಆಗಾಗ ಅನಾಮಿಕ ದೂರವಾಣಿ ಕರೆಗಳು ಮನೆಗೆ ಬರುತ್ತಿವೆ. ಮೂರನೇ ವಿಡಿಯೊ ಕ್ಯಾಸೆಟ್ ಮತ್ತೊಂದು ಡ್ರಾಯಿಂಗ್‍ನ್ನು ಹೊತ್ತು ತರುತ್ತದೆ. ಇಬ್ಬರೂ ಮತ್ತಷ್ಟು ಆತಂಕಕ್ಕೊಳಗಾಗುತ್ತಾರೆ. ರುಂಡವಿಲ್ಲದ ಹುಂಜವೊಂದು ರಕ್ತವ ಚೆಲ್ಲುತ್ತಾ ನಿಂತಿದೆ. ತಮ್ಮ ಕುಟುಂಬಕ್ಕೆ ಎದುರಾಗಲಿರುವ ಅನಾಹುತದ ಎಚ್ಚರಿಕೆಯಾಗಿಯೇ ಅದನ್ನು ಅರ್ಥೈಸಿಕೊಳ್ಳುವ ಆನ್ನಿ ಪೊಲೀಸರಿಗೆ ದೂರು ಕೊಡುವ ಎನ್ನುತ್ತಾಳೆ. ಪೊಲೀಸರು ಈ ದೂರನ್ನು ಸ್ವೀಕರಿಸುವುದಿಲ್ಲ ಎನ್ನುವ ಜಾರ್ಜ್ ತನಗೊಬ್ಬ ವ್ಯಕ್ತಿಯ ಮೇಲೆ ಅನುಮಾನವಿದೆ, ಇದನ್ನು ಇಷ್ಟರಲ್ಲೇ ಪತ್ತೆ ಹಚ್ಚುತ್ತೇನೆ ಎನ್ನುತ್ತಾನೆ. 



ಕತೆ ಸಾಗುತ್ತಿರುವಾಗ ಮಧ್ಯೆ ಮಧ್ಯೆ ಬಾಲಕನೊಬ್ಬ ರಕ್ತವ ಉಗುಳುತ್ತಿರುವ ದೃಶ್ಯವೊಂದು ‘ಇನ್ಸರ್ಷನ್ ಶಾಟ್’ ಆಗಿ ಬಂದು ನಮ್ಮ ಕತೆಯ ಅನುಸರಿಸುವಿಕೆಗೆ ತಡೆ ಒಡ್ಡಿ ನಮ್ಮನ್ನು ಗಲಿಬಿಲಿಗೊಳಿಸುತ್ತಲೇ ಇರುತ್ತದೆ. ಕತೆಗೂ ಇದಕ್ಕೂ ಏನು ಸಂಬಂಧ ಎಂದು ನಮಗೆ ಗೊತ್ತಾಗುವುದು ಜಾರ್ಜ್ ದೂರದೂರಿನಲ್ಲಿರುವ ಆತನ ತಾಯಿಯ ನೋಡಲು ಹೋದಾಗ. ಸಾವಕಾಶವಾಗಿ ತಾಯಿಯ ಜೊತೆ ಮಾತನಾಡುತ್ತಾ ತನ್ನ ಕನಸಲ್ಲಿ ಆಗಾಗ ಮಜಿದ್ ಬರುತ್ತಾನೆ ಎನ್ನುತ್ತಾನೆ. ಯಾರಾ ಮಜೀದ್ ಕೇಳುತ್ತಾಳೆ ತಾಯಿ. ಮಜಿದ್, ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಕೆಲಸಕ್ಕಿದ್ದನಲ್ಲ, ಅರಬ್ಬಿ, ಅವನ ಮಗ... ಎನ್ನುತ್ತಾನೆ. ಯಾವುದೂ ತನಗೆ ನೆನಪಾಗುತ್ತಿಲ್ಲ ಎನ್ನುವ ತಾಯಿ ಮಾತನ್ನು ಮತ್ತೆಡೆಗೆ ಸರಿಸುತ್ತಾಳೆ. ತಮ್ಮ ಮನೆಗೆ ಬರುತ್ತಿರುವ ವಿಡಿಯೊ ಕ್ಯಾಸೆಟ್ ಮತ್ತು ಡ್ರಾಯಿಂಗ್‍ಗಳ ವಿಷಯವನ್ನು ‘ಮುಚ್ಚಿಟ್ಟು’ ಬೇರೇನೊ ಮಾತನಾಡಿ ಜಾರ್ಜ್ ಮಾರನೇ ದಿನ ಹೊರಡುತ್ತಾನೆ. ಆ ರಾತ್ರಿಯೂ ಬಾಲಕನೊಬ್ಬ ಕೊಡಲಿಯನ್ನು ಎತ್ತಿಕೊಂಡು, ರಕ್ತವ ಉಗುಳುತ್ತಾ ಇವನತ್ತ ಜೋರಾಗಿ ಬರುತ್ತಿರುವಂತೆ ಕಂಡು ಕನಸಿನಿಂದ ಧಡಕ್ಕನೆ ಏಳುತ್ತಾನೆ. ಬೆವರು ಸುರಿಸುತ್ತಾ ಭಯಗೊಂಡು ತತ್ತರಿಸುತ್ತಾನೆ.

ವಾಪಸ್ ಪ್ಯಾರಿಸ್‍ಗೆ ಬಂದಾಗ ಮತ್ತೊಂದು ಕ್ಯಾಸೆಟ್ ಅವನಿಗಾಗಿ ಕಾಯುತ್ತಿರುತ್ತದೆ. ಆ ವಿಡಿಯೋದ ಮೂಲಕ ತಾನು ಅನುಮಾನಿಸಿದ ಮಜಿದ್‍ನನ್ನು ಕಂಡುಹಿಡಿಯುತ್ತಾನೆ. ಆದರೆ ಜಾರ್ಜ್‍ನ ಮಾತುಗಳನ್ನು ಮಜಿದ್ ಒಪ್ಪುವುದಿಲ್ಲ, ತಾನು ಯಾಕಾಗಿ ವಿಡಿಯೊ ಮಾಡಬೇಕು? ಕೇಳುತ್ತಾನೆ. ಕತೆಯ ಸಂಘರ್ಷ ಹೀಗೆ ಮುಂದುವರೆದು ಕೊನೆಯಲ್ಲಿ ಜಾರ್ಜ್‍ನ ಎದುರೇ ಮಜಿದ್ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದನ್ನು ಊಹಿಸಿರದ ಜಾರ್ಜ್ ಗಲಿಬಿಲಿಗೊಂಡು ನಿಲ್ಲುತ್ತಾನೆ. ಕತೆಯ ಕೊನೆಯಲ್ಲೂ ನಮಗೆ ಕ್ಯಾಸೆಟ್ ಕಳುಹಿಸುತ್ತಿರುವುದು ಯಾರೆನ್ನುವುದು ಗೊತ್ತಾಗುವುದೇ ಇಲ್ಲ. ಇಲ್ಲೇ ಕೆಚೆó ಭಿನ್ನವಾಗಿ ನಿಲ್ಲುವುದು.


ಮಾಮೂಲಿ ವ್ಯಾಪಾರಿ ಸಿನಿಮಾಗಳಲ್ಲಿನ ಅಥವ ಹಾಲಿವುಡ್ ಥ್ರಿಲ್ಲರ್ ಸಿನಿಮಾಗಳಲ್ಲಿ ಇರುವ ಥ್ರಿಲ್ಲರ್ ಅಂಶಗಳು ಯಾವೂ ಈ ಚಿತ್ರದಲ್ಲಿ ಕಾಣುವುದಿಲ್ಲ. ಕತೆಯ ಜೊತೆಗೆ ಸಾಗುತ್ತಾ ನಮ್ಮ ಕುತೂಹಲವನ್ನು ದುಪ್ಪಟ್ಟುಗೊಳಿಸುವ ವ್ಯಾಪಾರೀ ತಂತ್ರಗಳ್ಯಾವೂ ಇಲ್ಲಿ ಇಲ್ಲ! ಕುತೂಹಲವನ್ನು ಬೇಕೆಂತಲೇ ಮುರಿದು ಹಾಕುವ ಈ ಚಲನಚಿತ್ರದ ಬಹುತೇಖ ದೃಶ್ಯಗಳು ನಮಗೆ ಕೆಲವೊಮ್ಮೆ ಕಿರಿಕಿರಿಯುಂಟಾಗಿಸಿ ಕತೆಯ ಪಾತ್ರಗಳೊಂದಿಗೆ ತನ್ಮಯರಾಗದೆ, ಕತೆಯೊಂದಿಗೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ನಾವು ನೋಡುತ್ತಿರುವುದು ಒಂದು ಚಲನಚಿತ್ರ ಎಂಬುದ ನೆನಪಿಸಲೇ ಕೆಚೆó ಈ ಬಗೆಯ ಹಾದಿಯನ್ನು ಹಿಡಿಯುತ್ತದೆ. ನವ್ಯೋತ್ತರ ನಾಟಕ/ಸಿನಿಮಾ/ಗದ್ಯದ ನಿರೂಪಣಾ ಶೈಲಿಯಾದ ಇದು ಸಾಂಪ್ರದಾಯಿಕ ನೋಡುಗ ಶೈಲಿಯ ವಿರುದ್ಧವಾದುದು; ಇಂತಹ ಶೈಲಿಯ ವೈಶಿಷ್ಟ್ಯವೇನೆಂದರೆ ಕಥೆಯ ಜೊತೆ ನೋಡುಗರು ಸಂವಾದ ಬೆಳೆಸಿಕೊಳ್ಳಬೇಕು, ಕಥೆ ಕಟ್ಟುವಿಕೆಯಲ್ಲಿ ಪಾಲುದಾರರಾಗಬೇಕು ಮತ್ತು ನೋಡುತ್ತಿರುವ ಸಿನಿಮಾದ ಆಚೆ ನಿಂತು ಸಿನಿಮಾದೊಳಕ್ಕೆ ಪ್ರವೇಶಿಸಬೇಕು ಎನ್ನುವುದೇ. ಈ ಸಿನಿಮಾದಲ್ಲಿ ಬರುವ ದೃಶ್ಯಗಳು ಫೊಟೊಗಳೇ ಅಥವ ನಾವು ನೋಡುತ್ತಿರುವ ವಿಡಿಯೊ ನಿಂತು ಹೋಗಿದೆಯೇ ಎಂದು ಪರೀಕ್ಷಿಸಿಕೊಳ್ಳುವಂತೆ ಮಾಡುವ ಕೆಚೆó (ಹನೆಕೆಯ ಬಹುತೇಖ ಚಿತ್ರಗಳಂತೆ) ಕೆಲವೊಮ್ಮೆ ಕಿರಿಕಿರಿಯುಂಟುಮಾಡುತ್ತವೆ. ಇದರ ಮೂಲಕ ಕತೆಯೊಳಗಿನ ಥ್ರಿಲ್ಲರ್ ಅಂಶಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳದಂತೆ ಎಚ್ಚರಿಸುತ್ತದೆ. ಕತೆಯ ಹೊರಗೆ ನಿಂತೇ ಕತೆಯನ್ನು ‘ಫಾಲೊ’ ಮಾಡಲು ಉತ್ತೇಜಿಸುತ್ತದೆ. ಥ್ರಿಲ್ಲರ್ ಕತೆಗೆ ಒಂದು ತಾರ್ಕಿಕ ಅಂತ್ಯ ನೀಡದೆ ಅದನ್ನು ಹುಡುಕಿಕೊಳ್ಳುವಂತೆ ಅಥವ ಅಂದಾಜಿಸುವಂತೆ ನಮ್ಮನ್ನು ಅಣಿಗೊಳಿಸುತ್ತದೆ. ಹಾಗಾಗಿ ಕೆಚೆóಯ ಥ್ರಿಲ್ಲರ್ ಅಂಶಗಳು ಉತ್ತರಗಳ ಕಂಡುಕೊಳ್ಳದೆಯೇ ಅರ್ಧದಲ್ಲೇ ನಿಂತುಬಿಡುತ್ತವೆ; ಹಾಗೆ ಕಂಡುಕೊಳ್ಳುವ ಜವಬ್ದಾರಿಯನ್ನು ನಮ್ಮ ಕಣ್ಣುಗಳಿಗೆ ಹೊರಿಸಿ ನಿರ್ಗಮಿಸುತ್ತವೆ. ವಿಡಿಯೊ ಕ್ಯಾಸೆಟ್ ಕಳುಹಿಸುತ್ತಿದ್ದುದು ಮಜಿದ್‍ನೇ?ಮಜಿದ್-ಜಾರ್ಜ್‍ನಿಗೂ ಇರುವ ಸಂಬಂಧ ಎಂತಹದ್ದು? ಯಾಕಾಗಿ ಜಾರ್ಜ್ ಮಜಿದ್‍ನ ಮೇಲೆ ಆರೋಪ ಹೊರಿಸುತ್ತಾನೆ? ಮಜಿದ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಎಂಬಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರವನ್ನು Cache ನೀಡಿದಂತೆ ಕಂಡರೂ ಅದರ ಹಿಂದಿರುವ “ಸಬ್ ಟೆಕ್ಸ್ಟ್” ಗಳ ಅರ್ಥೈಸಿಕೊಳ್ಳುವಂತೆ ನಮ್ಮನ್ನದು ದೂಡುತ್ತದೆ.


ಮಜಿದ್‍ನ ತಂದೆ ತಾಯಿ ಸತ್ತಿದ್ದು ಯಾಕಾಗಿ ಎಂಬುದ ಹುಡುಕ ಹೊರಟರೆ ನಾವು ಫ್ರೆಂಚ್ ವಸಾಹತುಶಾಹಿ ಇತಿಹಾಸಕ್ಕೆ ಹೋಗಬೇಕಾಗುತ್ತದೆ. ಈ ಇತಿಹಾಸವನ್ನು ಹೇಳಲು ಕೆಚೆó ಎಲ್ಲೂ ಫ್ಲ್ಯಾಶ್‍ಬ್ಯಾಕ್ ತಂತ್ರವನ್ನು ಬಳಸುವುದಿಲ್ಲ. ಜಾರ್ಜ್‍ನ ಮೂರ್ನಾಲ್ಕು ಮಾತುಗಳ ಮೂಲಕ ಮತ್ತು ಕೆಲವು ಹಳೇ ಕಾಲದ ‘ಇನ್ಷರ್ಷನ್ -ವೈಡ್ ಆಂಗಲ್- ಶಾಟ್‍ಗಳ’ ಬಳಸಿಕೊಂಡು ಇತಿಹಾಸ-ವರ್ತಮಾನಗಳನ್ನು ಕೆಡವಿ ಪುನರ್ ರೂಪಿಸುತ್ತದೆ ಕೆಚೆó. ವಸಾಹತುಶಾಹಿ ಇತಿಹಾಸ ಎಂಬ ಮಹಾಕಥನವನ್ನು ಒಂದು ಕುಟುಂಬದೊಳಗೆ ಸಂಭವಿಸುವ ಸಣ್ಣ ಘಟನೆಯೊಂದಿಗೆ ತಳಕು ಹಾಕಿ ಇತಿಹಾಸವನ್ನು ವರ್ತಮಾನಗಳನ್ನು ನಿರ್ವಚಿಸುತ್ತದೆ. ಜೊತೆಗೆ ಕತೆಯಲ್ಲಿ ಎಲ್ಲೂ ಮುಖ್ಯವೆನಿಸದ ಟಿ.ವಿ ನ್ಯೂಸ್ ಮತ್ತೊಂದು ‘ಸಬ್ ಟೆಕ್ಸ್ಟ್’ ಆಗಿ ಕೆಲಸ ಮಾಡುವುದು ಕೆಚೆóಯ ಹೆಚ್ಚುಗಾರಿಕೆ. ಜಾರ್ಜ್-ಆನ್ನಿ ಚರ್ಚಿಸುತ್ತಿರುವಾಗ ಟಿ.ವಿಯಲ್ಲಿ ಬರುತ್ತಿರುವ, (ವರ್ತಮಾನದಲ್ಲಿ ನಡೆಯುತ್ತಿರುವ) ಮಧ್ಯ ಏಷ್ಯಾದ ಯುದ್ಧದ ತುಣುಕುಗಳು ನಮಗೆ ಮತ್ತಿನ್ನೇನನ್ನೊ ಕಲ್ಪಿಸಿಕೊಳ್ಳಲು ಅವಕಾಶ ನೀಡುತ್ತದೆ; ಇದು ಒಂದು ಓದಾದರೆ, ಇಂತಹ ಹತ್ತು ಹಲವು ಓದುಗಳನ್ನು ಹುದುಗಿಸಿಕೊಂಡಿರುವ ಕೆಚೆó ಉತ್ತರಗಳ ನೀಡದೆ ಬರೀ ಪ್ರಶ್ನೆಗಳನ್ನು ಕೇಳುತ್ತದೆ. ಆ ವಿಡಿಯೊ ಕ್ಯಾಸೆಟ್‍ಗಳ ಕಳುಹಿಸುತ್ತಿದ್ದವರ್ಯಾರು? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. 

ವಿಡಿಯೊ ಕ್ಯಾಸೆಟ್‍ಗಳನ್ನು ಮಜಿದ್ ಕಳುಹಿಸುತ್ತಿಲ್ಲ ಎಂಬುದು ನಮಗೆ ಚಿತ್ರದಲ್ಲಿ ಸ್ಪಷ್ಟವಾಗುತ್ತದೆ. ಹಾಗಾದರೆ ಕಳುಹಿಸುತ್ತಿರುವುದು ಯಾರಿರಬಹುದು? ಮಜಿದ್‍ನ ಮಗ? ಜಾರ್ಜ್‍ನ ಮಗ ಪಿಯೊ? ಇಬ್ಬರೂ ಒಟ್ಟಿಗೆ ಸೇರಿ ಕಳುಹಿಸುತ್ತಿರಬಹುದೆ? ಈ ಅನುಮಾನಕ್ಕೆ ಬಲವಾದ ಕಾರಣವನ್ನೂ ಚಿತ್ರ ಒದಗಿಸುತ್ತದೆ. ಚಿತ್ರದ ಕೊನೆಯಲ್ಲಿ ಪಿಯೊ ಮತ್ತು ಮಜಿದ್‍ನ ಮಗ ಇಬ್ಬರೂ ಶಾಲೆಯ ಬಳಿ ಭೇಟಿಯಾಗುತ್ತಾರೆ. ವೈಡ್ ಶಾಟ್ ಆದ ಆ ದೃಶ್ಯದಲ್ಲಿ ಹತ್ತಾರು ಜನರು ಕಾಣಿಸುತ್ತಾರೆ, ಎಲ್ಲೊ ಒಂದು ಮೂಲೆಯಲ್ಲಿ ಪಿಯೊ ಮತ್ತು ಮಜಿದ್‍ನ ಮಗ ಭೇಟಿಯಾಗಿ ಏನನ್ನೊ ಮಾತನಾಡಿಕೊಳ್ಳುತ್ತಾರೆ. (ಆ ಶಾಟ್ ಕೂಡ ವಿಡಿಯೊವೊಂದರ ಅಥವ ಸಿಸಿಟಿವಿಯೊಂದರ ದೃಶ್ಯವಾಗಿ ಕಾಣುತ್ತದೆ) ಈ ಇಬ್ಬರೂ ಒಟ್ಟಿಗೆ ಸೇರಿ ವಿಡಿಯೊಗಳ ಕಳುಹಿಸುತ್ತಿರಬಹುದೆ? ಆ ಮೂಲಕ ಚಿತ್ರ ಏನನ್ನು ಹೇಳುತ್ತದೆ?



ವಸಾಹತ್ತೋತ್ತರ ಫ್ರಾನ್ಸ್‍ನ ಅವಶ್ಯಕತೆಯ ಬಗ್ಗೆ ಸೂಚನೆ ನೀಡುತ್ತದೆಯೇ? ಇವರಿಬ್ಬರ ಹೊರತಾಗಿ ವಿಡಿಯೊ ಕ್ಯಾಸೆಟ್‍ಗಳ ಮತ್ತಿನ್ಯಾರೊ ಕಳುಹಿಸುತ್ತಿರಬಹುದೆ? ಜಾರ್ಜ್‍ನೇ ಕಳುಹಿಸಿಕೊಳ್ಳುತ್ತಾ ಇರಬಹುದೆ? ಅವನ ಸುಪ್ತ ಮನಸ್ಸಿನೊಳಗಿರುವ ಪಾಪಪ್ರಜ್ಞೆಯ ಕಾರಣದಿಂದ ಹೀಗೆ ಸಂಭವಿಸುತ್ತಿರಬಹುದೆ? ಬಾಲ್ಯದಲ್ಲಿ ಎಂದೋ ಘಟಿಸಿದ ಘಟನೆಯಿಂದ ಒಳಗೊಳಗೆ ಬಳಲುತ್ತಿರುವ ಜಾರ್ಜ್ ತಾನೇ ವಿಡಿಯೋಗಳ ಕಳುಹಿಸಿಕೊಂಡು ಮಜಿದ್‍ನನ್ನು ಹುಡುಕಿ ಅವನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ದೂಡಿ ಪಾಪಪ್ರಜ್ಞೆಯಿಂದ ಹೊರಬಂದನೇ? ಅಥವ ನವ್ಯೋತ್ತರ ಸಾಹಿತ್ಯ/ ಸಿನಿಮಾಗಳ (ಪೋಸ್ಟ್ ಮಾಡರ್ನ್) ತಂತ್ರವಾದ ಬರಹಗಾರ/ ನಿರ್ದೇಶಕನೇ ಕತೆಯಲ್ಲಿ ಭಾಗಿಯಾಗುತ್ತಾ ಕತೆಯನ್ನು ಬೇರೊಂದು ಹಾದಿಯಲ್ಲಿ ಸರಿಸುತ್ತಿದ್ದಾನೆಯೇ? ಅಂದರೆ, ಕತೆಯ ಮುಖ್ಯ ಪಾತ್ರವಾದ ಜಾರ್ಜ್‍ನಿಗೆ ಹನೆಕೆಯೇ ಅಂದರೆ ನಿರ್ದೇಶಕನೇ ವಿಡಿಯೊ ಕ್ಯಾಸೆಟ್‍ಗಳ ಕಳುಹಿಸುವ ಮುಖೇನ ನೋಡುಗರನ್ನು ವರ್ತಮಾನ/ ಇತಿಹಾಸಗಳ ಕೆಡವಿ ಕಟ್ಟುವಂತೆ ಪ್ರೇರೇಪಿಸುತ್ತಿದ್ದಾನೆಯೇ? ಆ ಮೂಲಕ ಸಂಪ್ರದಾಯವಾದೀ ಸಿನಿಮಾ ನೋಟಕ್ರಮವನ್ನು ಒಡೆದು ಹೊಸ ನೋಟಕ್ರಮಕ್ಕೆ ನಮ್ಮನ್ನು ಅಣಿಗೊಳಿಸುತ್ತಿದ್ದಾನೆಯೇ?

Caché  ಎಂಬ ಫ್ರೆಂಚ್ ಪದದ ಇಂಗ್ಲಿಷ್ ಅನುವಾದವಾದ ‘ಹಿಡೆನ್’ ಎಂಬ ಪದಕ್ಕೆ ನಾವು ‘ಗುಪ್ತ’ ಅಥವ ‘ಮರೆಯಾಗಿರುವುದು’ ಅಥವ ‘ಮುಚ್ಚಿಡಲ್ಪಟ್ಟಿರುವುದು’ ಎಂದು ಹೇಳಬಹುದು. ಕತೆಗೆ ಸೂಕ್ತವಾಗಿರುವ ಚಿತ್ರದ ಶೀರ್ಷಿಕೆ ಹಲವಾರು ‘ಹಿಡೆನ್’ಗಳ ಹೊಂದಿವೆ. ಹಲವಾರು ವಿಚಾರಗಳು ಹುದುಗಿಕೊಂಡಿವೆ, ಚಿತ್ರದಲ್ಲಿ ಬರುವ ಬಹುತೇಖ ಎಲ್ಲಾ ಪಾತ್ರಗಳೂ ಏನನ್ನೊ ಬಚ್ಚಿಟ್ಟುಕೊಂಡಿವೆ, ಅಲ್ಜೀರಿಯಾದ ಮೇಲೆ ನಡೆಸಿದ ವಸಾಹತುಶಾಹಿ ಧಾಳಿ, 1961ರಲ್ಲಿ ಕೆಲವು ಅಲ್ಜೀರಿಯನ್ನರ ಮೇಲಿನ ಕಗ್ಗೊಲೆಗಳ ಫ್ರಾನ್ಸ್ ಬಚ್ಚಿಟ್ಟುಕೊಂಡಿರುವಂತಹ ಹತ್ತಾರು ‘ಹಿಡೆನ್’ಗಳು ಇಲ್ಲಿವೆ. ಅಷ್ಟಕ್ಕೂ ಕತೆ ಸಾಗುವುದೂ ಕೂಡ ‘ಹಿಡೆನ್’ ಕ್ಯಾಮೆರಾದಲ್ಲೇ! ಇಂತಹ ಹತ್ತಾರು ‘ಗುಪ್ತ ಕತೆಗಳ’ ಹುದುಗಿಸಿಕೊಂಡಿರುವ ಈ ಕೆಚೆó ಸಿನಿಮಾವನ್ನು ಫ್ರಾನ್ಸ್‍ನ ಬೌದ್ಧಿಕ ವಲಯ ಬಹುವಾಗಿ ಮೆಚ್ಚಿಕೊಂಡಿತು; ಪ್ರತಿ ವರ್ಷವೂ ಫ್ರಾನ್ಸ್‍ನಲ್ಲಿ ನಡೆಯುವ ಜಗತ್ತಿನ ಪ್ರತಿಷ್ಠಿತ ಸಿನಿಮಾ ಫೆಸ್ಟಿವಲ್ ಆದ ಕೇನ್ಸ್ ಫೆಸ್ಟಿವಲ್ ಈ ಚಿತ್ರವ ನಿರ್ದೇಶಿಸಿದ ಮೈಖೇಲ್ ಹನೆಕೆಗೆ ಉತ್ತಮ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಿತು. ಈ ಚಿತ್ರದ ತಿಳಿವು ಏಕಮುಖಿಯಾದುದಲ್ಲ! ಬಹು ಅರ್ಥಗಳನ್ನು ಅಡಗಿಸಿಕೊಂಡಿರುವಂತಹದ್ದು. ಈ ಕಾಲದ ಜರೂರು, ಬಿಕ್ಕಟ್ಟುಗಳನ್ನು ಇದೇ ಕಾಲದ ಮಾಧ್ಯಮಗಳ ಅಣಕಿಸುತ್ತಾ ಹೇಳುವಂತಹದ್ದು ! ತಮ್ಮ ದೇಶವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಗಲಾಟೆಯೆಬ್ಬಿಸಿ ಸಿನಿಮಾ ಮಂದಿರಗಳ ಧ್ವಂಸ ಮಾಡಲಿಲ್ಲ, ಫ್ರಾನ್ಸ್‍ನಲ್ಲಿ ಯಾರೂ... ಈ ಕಾರಣದಿಂದಲೂ ಹನೆಕೆಯ ಕೆಚೆó ನಮಗಿಂದು ಮುಖ್ಯವಾಗುತ್ತದೆ. 





Comments