"ಬರ್ನಿಂಗ್" ಎಂಬ ಉರಿ
ಕೊರಿಯನ್ ಸಿನಿಮಾಗಳೂ ನಮ್ಮ ಸಿನಿಮಾಗಳಂತೆಯೇ! ಎರಡೂ ಹಾದಿಗಳನ್ನೊಳಗೊಂಡ ಸಿನಿಮಾ ರಂಗ ಅದು! ಯುರೋಪಿಯನ್ ಸಿನಿಮಾಗಳಿಂದ ಪ್ರಭಾವಗೊಂಡ ಆರ್ಟ್ ಹೌಸ್ ಸಿನಿಮಾಗಳಿರುವಂತೆಯೇ ಹಾಲಿವುಡ್ ಸಿನಿಮಾಗಳನ್ನೂ ಗಡಗಡ ನಡುಗಿಸುವ ಪಾಪ್ಯುಲರ್ ಸಿನಿಮಾಗಳೂ ಇವೆ! ಕೊರಿಯನ್ ಸಿನಿಮಾಗಳ ಬಗ್ಗೆ ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು, ಕೆಲವು ಸಿನಿಮಾಗಳನ್ನು ನೋಡೂ ಇರ್ತೀರಿ... ಸಿನಿಮಾರಂಗದವರಾಗಿದ್ದರಂತೂ ಒಂದು ಕೊರಿಯನ್ ಸಿನಿಮಾನ್ನಾದರೂ ನೀವು ಖಂಡಿತ ನೋಡಿರಲೇ ಬೇಕು... ಅಷ್ಟರಮಟ್ಟಿಗೆ ಕೊರಿಯನ್ ಸಿನಿಮಾಗಳು ಇಂದು ನಮ್ಮನ್ನು ವ್ಯಾಪಿಸಿವೆ!
ಕೊರಿಯನ್ ಸಿನಿಮಾ ಎಂದರೆ ನಮ್ಮಲ್ಲಿ ಕೆಲವರಿಗೆ ತಟ್ಟಂಥ ನೆನಪಿಗೆ ಬರುವುದು ಕಿಮ್ ಕಿ ಡುಕ್ ಮತ್ತು ಹಾಂಗ್ ಸಂಗ್ ಸೂ... ಇವರಿಬ್ಬರ ಹೊರತಾದ ಫಿಲ್ಮ್ ಮೇಕರ್ಸ್ ನನ್ನ ಹಾಗೆ ನಿಮ್ಮಲ್ಲಿ ಕೆಲವರನ್ನು ನಿದ್ರೆಯಲ್ಲೂ ಕಾಡುತ್ತಿರಬಹುದು... ಅಂತಹ ಒಬ್ಬ ನಿರ್ದೇಶಕನ ಇತ್ತೀಚಿಗಿನ ಸಿನಿಮಾದ ಬಗ್ಗೆಯೇ ನಾನೀಗ ನಿಮ್ಮ ಜೊತೆ ಮಾತನಾಡಲಿದ್ದೇನೆ. ಈ ಸಿನಿಮಾ 2018ರ ಕಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿಯೊಂದನ್ನು ಕರಕಲಾಗಿಸಿ, ಮತ್ತಷ್ಟು ಜಗತ್ತಿನ ಫಿಲ್ಮ್ ಫೆಸ್ಟಿವಲ್ಗಳಿಗೆ ನುಗ್ಗಿ ಪ್ರಶಸ್ತಿಗಳನ್ನು ಧ್ವಂಸಗೊಳಿಸಿ ನಮ್ಮ ಇಂಡಿಯಾದ ಹಲವು ಚಿತ್ರೋತ್ಸವಗಳಲ್ಲಿ ಹಲವರ ಕಂಗಳಿಗೆ ‘ಬೆಂಕಿ’ ಇಟ್ಟಿತು (ಅಂತಾನೇ ಅಂದ್ಕೋತೇನೆ)! ಈ ಸಿನಿಮಾ ಈ ಬಾರಿಯ (2019) ನಮ್ಮ ಬೆಂಗಳೂರಿನ ಅಂತರ್ರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತು.
ಜಪಾನಿನ ಬರಹಗಾರ ಹರೂಕಿ ಮುರಕಾಮಿಯ 'Barn Burning' ಎನ್ನುವ ಕಥೆಯಿಂದ ಪ್ರೇರಿತಗೊಂಡು ನಿರ್ಮಾಣವಾದ ಸಿನಿಮಾ ಇದು. ಮುರಕಾಮಿ ನಿಮ್ಮಲ್ಲನೇಕರಿಗೆ ತಿಳಿದೇ ಇದೆ. ಸಮಕಾಲೀನ ಗದ್ಯದಲ್ಲಿ ಯುವಕರನ್ನು ಹುಚ್ಚೆಬ್ಬಿಸಿರುವ ಬರಹಗಾರ. ಸುಮಾರು ವರ್ಷಗಳಿಂದ ಆತನ ಹೆಸರು ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳುತ್ತಲೇ ಇದೆ. ನಾ ಅತಿಯಾಗಿ ಪ್ರೀತಿಸುವ ಬರಹಗಾರನೂ ಹೌದು... ಆತನ ಬಹುತೇಖ ಕಥೆ/ ಕಾದಂಬರಿಗಳನ್ನು ತಿಣುಕಾಡಿ ಮತ್ತೆ ಮತ್ತೆ ಓದುವ ನನ್ನಂತಹವರಿಗೆ ಈ ಸಿನಿಮಾ ಕೌತುಕ! ಆದರೆ ಸೋಜಿಗವೆನ್ನುವಂತೆ ಮುರಕಾಮಿಯ ಕಥೆಗಿಂತ ಈ ಸಿನಿಮಾವೇ ನನಗೆ ತುಂಬಾ ಇಷ್ಟವಾಯಿತು.
ಸಿನಿಮಾ ಎನ್ನುವುದು ಹೇಗೆ Subtle ಆಗಿರಬೇಕು ಎನ್ನುವುದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಕಳೆದ ವರ್ಷ ತೆರೆಗೆ ಬಂದ ಕೊರಿಯನ್ ಸಿನಿಮಾ - Lee Chang -dong ನಿರ್ದೇಶನದ- 'Burning'. ‘ಉರಿ’ ಅಥವ ‘ಸುಡು’ ಎಂದು ಕನ್ನಡೀಕರಿಸಿಕೊಳ್ಳಬಹುದಾದ ಈ ಟೈಟಲ್ ಇಡೀ ಸಿನಿಮಾದ ಓಘಕ್ಕೆ ನೂರಕ್ಕೆ ನೂರು ಒಗ್ಗುವಂತಹದು. ಸಿನಿಮಾದ ಮೊದಲ ಶಾಟ್ನಲ್ಲೇ ಇಡೀ ಸಿನಿಮಾದ ಒಟ್ಟು “gist” ನ್ನು ಹಿಡಿದಿಡುವ ಸಿನಿಮಾಗಳಲ್ಲಿ ಇದೂ ಒಂದೂ!
ಸಿನಿಮಾ ಶುರುವಾಗುವುದೇ ಹೊಗೆಯ ಮೂಲಕ. ಸಣ್ಣ ಪಿಕ್ಅಪ್ ಟ್ರಕ್ ಒಂದರ ಡೋರ್ ನ ಹಿಂದಿನಿಂದ ಆ ಹೊಗೆ ಬರುತ್ತಿದೆ. ಸಿನಿಮಾದ ನಾಯಕ ಜಾಂಗ್ಸೂ ಸಿಗರೇಟ್ ಸೇದಿ ಟ್ರಕ್ನೊಳಗಿಂದ ಕೆಲವು ಸಾಮಾನುಗಳ ಹೊತ್ತುಕೊಂಡು ಹೊರಡುತ್ತಾನೆ. ಅಂಗಡಿ/ಸೂಪರ್ ಮಾರ್ಕೆಟ್ಗಳಿಗೆ ಸರಕು ಸಾಮಾಗ್ರಿಗಳ ತಲುಪಿಸುವ ‘ಡೆಲಿವರಿ ಬಾಯ್’ ಅವನು. ಸೃಜನಶೀಲ ಬರವಣಿಗೆಯ ಮೇಜರ್ ನಲ್ಲಿ ಪದವಿ ಮುಗಿಸಿರುವ ಅವನಿಗೆ ಖಾಯಂ ಕೆಲಸವಿಲ್ಲ; ಓದಿರುವುದಕ್ಕೂ ಅವನು ಮಾಡುತ್ತಿರುವ ಕೆಲಸಕ್ಕೂ ಸಂಬಂಧಗಳಿಲ್ಲದಂತಹ ಬದುಕು; ಆದರೆ ಅವನೊಳಗೆ ಒಂದು ಅದಮ್ಯ ಆಸೆ ಉರಿಯುತ್ತಲೇ ಇದೆ: ಕಾದಂಬರಿ ಬರೆಯುವ ಹುಮ್ಮಸ್ಸು ಆಳದಲ್ಲಿ ಅವನನ್ನು ಕೆಣಕುತ್ತಲೇ ಇದೆ. ಆದರೆ ಏನನ್ನು ಬರೆಯುವುದೆಂದು ಗೊತ್ತಾಗದೆ ತೊಳಲಾಡುತ್ತಿದ್ದಾನೆ. ಇದು ಈ ಸಿನಿಮಾದ ಮೊದಲನೆಯ ಉರಿ- Burning! ವಿಲಿಯಂ ಫಾಕ್ನರ್ ನ ಬರಹಗಳನ್ನು ಇಷ್ಟಪಡುವ ಅವನಿಗೆ ವೈಯುಕ್ತಿಕ ಸಮಸ್ಯೆಯೊಂದು ಚುಚ್ಚುತ್ತಿದೆ.
ಸಿಯೋಲ್ ನಗರದಿಂದ ಆಚೆ, ಉತ್ತರ ಕೊರಿಯಾದ ಗಡಿಗಂಟಿಕೊಂಡಿರುವಂತೆ ಇರುವ ಹಳ್ಳಿಯವನಾದ ಅವನಿಗೆ ಯಾರೂ ಆತ್ಮೀಯರಿಲ್ಲ, ಸದ್ಯಕ್ಕೆ ಮನೆಯಲ್ಲಿ ಒಬ್ಬನೇ ಇದ್ದಾನೆ! ಹಸುಗಳ ಸಾಕುತ್ತಾ ಕೃಷಿ ಮಾಡುತ್ತಿದ್ದ ಅವನ ತಂದೆ ಈಗ ಜೈಲಿನಲ್ಲಿದ್ದಾನೆ. ನಿವೃತ್ತ ಸೈನಿಕನಾದ ಆತ ಸರ್ಕಾರಿ ಅಧಿಕಾರಿಯೊಬ್ಬನ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪೊಲೀಸರು ಅವನನ್ನು ಬಂಧಿಸಿದ್ದಾರೆ; ಅದರ ವಿಚಾರಣೆ ನಡೆಯುತ್ತಲಿದೆ.
ಕಥೆಯ ಮೊದಲ ಪ್ಲಾಟ್ ಪಾಯಿಂಟ್ ಆರಂಭದಲ್ಲೇ ಜರುಗುತ್ತದೆ. ಸಿನಿಮಾದ ನಾಯಕ ಜಾಂಗ್ಸೂ ತನ್ನ ಬಾಲ್ಯ ಕಾಲದ ಗೆಳತಿಯೊಬ್ಬಳನ್ನು ಸೂಪರ್ ಮಾರ್ಕೆಟ್ ಒಂದರ ಬಳಿ ಭೇಟಿಯಾಗುತ್ತಾನೆ. ಆದರೆ ಅವನಿಗಾಕೆ ನೆನಪಿಲ್ಲ. ಆಕೆಯೇ ಇವನನ್ನು ಗುರುತಿಸುವುದು. ಆಕೆ ಹೇಳುವ ಹಳೆಯ ವಿವರಗಳು ನಿಜವೋ ಸುಳ್ಳೊ ... ಎಲ್ಲವೂ ಅಸ್ಪಷ್ಟ ಜಾಂಗ್ಸೂಗೆ! ಕೆಲವು ನೆನಪಾದರೆ ಹಲವು ನೆನಪಾಗುತ್ತಿಲ್ಲ. ಸೂಪರ್ ಮಾರ್ಕೆಟ್ ಒಂದರ ಬಾಗಿಲಲ್ಲಿ ನೃತ್ಯ ಮಾಡುತ್ತಾ ಗ್ರಾಹಕರನ್ನು ಸೆಳೆಯುವ ‘ಡ್ಯಾನ್ಸ್ ಸೇಲ್ಸ್ ಗರ್ಲ್’ ಅಥವ ‘ಚಿಯರ್ ಸೇಲ್ಸ್ ಗರ್ಲ್’- ಆಕೆಯ ಹೆಸರು ಹೇಯ್ಮಿ. ಸಿನಿಮಾ ಸ್ಟಾರ್ ಆಗಬೇಕೆಂಬ ಗುರಿಯುಳ್ಳ ಆಕೆ “ಮಹಾ” ಕನಸಿನ ಸಣ್ಣ ನಡುವುಳ್ಳ ಚಿಗರಿಗಂಗಳ ಚಿಲುಮೆ! ಆಕೆಗೂ ಯಾರೂ ಆತ್ಮೀಯರಿದ್ದಂತಿಲ್ಲ!
ಹೇಯ್ಮಿ ಮತ್ತು ಜಾಂಗ್ಸೂ ಇಬ್ಬರೂ ರೆಸ್ಟೋರೆಂಟಿನಲ್ಲಿ ಊಟ ಮಾಡುತ್ತಾ ತಮ್ಮ ಜೀವನದ ತುಣುಕುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಜೀವನದ ಮೇಲೆ ಆಕೆಗೆ ಆಸಕ್ತಿ, ನಿರಾಸಕ್ತಿ, ಪ್ರೀತಿ, ದ್ವೇಷ ಎಲ್ಲವೂ ಒಟ್ಟೊಟ್ಟಿಗೆ ಇದ್ದಂತಿದೆ. ಆದರೆ ಬದುಕಿನ ಕುರಿತು ಆಕೆಯೊಳಗೆ ಮಹಾ ಹಸಿವು, ಬತ್ತದ ಬಾಯಾರಿಕೆ! ಜಾಂಗ್ಸೂನಿಗೂ ಯಾವುದರ ಮೇಲೂ ಅಷ್ಟು ಆಸಕ್ತಿಯಿದ್ದಂತಿಲ್ಲ. ಹಳ್ಳಿಯ ಬಹುತೇಖರಿಗಿರುವಂತೆ ಅಂಜಿಕೆ, ಸಂಕೋಚ ಮತ್ತು ಅಳುಕು ಅವನೊಳಗೂ ಇದೆ. ಈ ಇಬ್ಬರ ನಡುವಿನ ಸಾಮಾನ್ಯ ಅಂಶವೆಂದರೆ ಒಂಟಿತನ ಮತ್ತು ಖಾಯಂ ಉದ್ಯೋಗವಿಲ್ಲದಿರುವುದು. ಆದರೆ ಬದುಕಿನ ಬಗೆಗೆ ಅಪಾರ ಕುತೂಹಲವನ್ನಿಟ್ಟುಕೊಂಡಿರುವ ಹೇಯ್ಮಿ ಇಷ್ಟರಲ್ಲೇ ಆಫ್ರಿಕಾದ ಕೀನ್ಯಾಕ್ಕೆ ಹೋಗುವವಳಿದ್ದಾಳೆ. ಅಲ್ಲಿಯ “ಗ್ರೇಟ್ ಹಂಗರ್ಸ್” ನೃತ್ಯವನ್ನು ನೋಡಲು ಉತ್ಸುಖಳಾಗಿದ್ದಾಳೆ (ಈ ಸೀನ್ ನಲ್ಲಿ ಬರುವ ಒಂದು ಮ್ಯಾಜಿಕ್ ಮೊಮೆಂಟ್ ನ್ನು ಸಿನಿಮಾ ನೋಡಿಯೇ ಅದನ್ನು ಅನುಭವಿಸಬೇಕು. ಆ ಮೊಮೆಂಟೇ ಇಡೀ ಸಿನಿಮಾದ ಹುಕ್ ಪಾಯಿಂಟ್). ಊಟ ಮಾಡುತ್ತಾ ಹೇಯ್ಮಿ ಜಂಗ್ಸೂವನ್ನು ನೋಡಿ ಒಂದು ಸಹಾಯ ಕೇಳುತ್ತಾಳೆ. ತಾನು ಆಫ್ರಿಕಾಕ್ಕೆ ಹೋದಾಗ ತನ್ನ ಬೆಕ್ಕನ್ನು ನೋಡಿಕೊಳ್ಳುವಿಯಾ!? ಎಂದು ಆಕೆ ಕೇಳಿದಾಗ ಆತ ನಗುತ್ತಾ ಒಪ್ಪಿಕೊಳ್ಳುತ್ತಾನೆ; ಬೆಕ್ಕನ್ನು ತನ್ನ ಮನೆಗೆ ಎತ್ತಿಕೊಂಡು ಹೋಗುತ್ತೇನೆ, ಯು ಡೋಂಟ್ ವರಿ ಎಂದಾಗ ಹೇಯ್ಮಿ ‘ಹೆಹೆ... ನೊ ವೇ... ಬೆಕ್ಕು ನಿನ್ನ ಜಾಗಕ್ಕೆ ಬರಲ್ಲ, ನೀನೇ ಬೆಕ್ಕಿರುವ ಜಾಗಕ್ಕೆ ಹೋಗಬೇಕು’ ಎನ್ನುತ್ತಾಳೆ.
ಮಾರನೇ ದಿನ ಹೇಯ್ಮಿ ಮನೆಗೆ ಹೋದಾಗ ಬೆಕ್ಕು ಕಾಣಿಸುವುದೇ ಇಲ್ಲ. ಜಾಂಗ್ಸೂ ನಕ್ಕು “ಬೆಕ್ಕು ನಿಜವಾಗಲೂ ಇಲ್ಲಿದೆಯಾ ಅಥವ ಬೆಕ್ಕು ಇಲ್ಲಿಲ್ಲ ಎನ್ನುವುದ ನಾನು ಮರೆತುಬಿಡಬೇಕಾ?” ಎಂದು ನಗುತ್ತಾನೆ (ಈ ಡೈಲಾಗ್ ಅರ್ಥ ಆಗಬೇಕಾದರೆ ನಾ ಹಿಂದಿನ ಪ್ಯಾರಾಗ್ರಾಫ್ನಲ್ಲಿ ಹೇಳಿದ ದೃಶ್ಯವನ್ನು ನೀವು ನೋಡಬೇಕು).
ಹೇಯ್ಮಿ ಆಫ್ರಿಕಾಕ್ಕೆ ಹೋದಾಗ ಜಾಂಗ್ಸೂ ದಿನವೂ ಆಕೆಯ ಅಪಾರ್ಟ್ಮೆಂಟಿಗೆ ಹೋಗಿ ಬೆಕ್ಕಿಗೆ ‘ಫುಡ್’ ಇಟ್ಟು ಬರುತ್ತಾನೆ. ಆದರೆ ಒಮ್ಮೆಯೂ ಇವನ ಕಣ್ಣಿಗದು ಕಾಣಿಸಿಕೊಳ್ಳುವುದೇ ಇಲ್ಲ, ‘ಫುಡ್’ ಮಾತ್ರ ‘ಮಾಯ’ವಾಗಿರುತ್ತದೆ. ಆ ಅಪಾರ್ಟ್ಮೆಂಟಿನ ಕಿಟಕಿಯಲ್ಲಿ ಕಾಣುವ ನಗರದ ‘ವ್ಯೂ’ ಅವನ ಒಳಗನ್ನು ಕೆಣಕುತ್ತಲೇ ಇರುತ್ತದೆ. ಅದನ್ನು ನೋಡುತ್ತಾ ‘ಸ್ವ-ಆನಂದ’ವನ್ನು ಅನುಭವಿಸುವ ಅವನ ಒಳಗಿನ ಉರಿಯನ್ನು ಅರಿಯಬೇಕಾದರೆ ನಾವೂ ಅವನ ಜೊತೆ ಉರಿಯಬೇಕು! ಅದೇ ಜಾಗದಲ್ಲಿ ಕೆಲವು ದಿನಗಳ ಹಿಂದೆ ಅರೆಮನಸ್ಕನಾಗಿ ಹೇಯ್ಮಿಯೊಂದಿಗೆ ಅವನು ಅನುಭವಿಸಿದ ಅಥವ ಹಾಗಂದುಕೊಂಡ ಆನಂದದ ನೆನಪು ಅವನನ್ನು ಮತ್ತಷ್ಟು ಬೆಂಕಿಗೆ ತಳ್ಳಿತೊ ಅಥವ ನಂದಿಸಿತೊ ಎನ್ನುವಷ್ಟರಲ್ಲಿ ಅವನ ‘ಜಂಗಮವಾಣಿ’ ಕಿರುಚಿಕೊಳ್ಳುತ್ತದೆ. ಅತ್ತ ಹೇಯ್ಮಿ ಕೀನ್ಯಾದ ಏರ್ಪೋರ್ಟಿನಿಂದ ಮಾತನಾಡುತ್ತಿದ್ದಾಳೆ. ಬಾಂಬ್ ಸ್ಫೋಟದ ಕಾರಣ ತಾನು ಬರುವುದು ತಡವಾಯ್ತು, ನಾಳೆ ಸಿಯೋಲ್ ಗೆ ಬರುತ್ತೇನೆ, ಏರ್ಪೋರ್ಟಿಗೆ ಬಂದು ತನ್ನನ್ನು ರಿಸೀವ್ ಮಾಡುವಂತೆ ಹೇಳುತ್ತಾಳೆ. ಇವನು ‘ಹಾಂ ಊಂ’ ಎನ್ನುತ್ತಾ, ತೊದಲುತ್ತಾ ತಲೆ ಆಡಿಸುತ್ತಾನೆ.
ಹೇಯ್ಮಿ ತನ್ನ ಆಫ್ರಿಕಾದ ಪ್ರವಾಸವನ್ನು ಮುಗಿಸಿ ಬರುವ ಈ ಸೀನ್ನಲ್ಲೇ ಸಿನಿಮಾದ ಎರಡನೆಯ ಪ್ಲಾಟ್ ಪಾಯಿಂಟ್ ಶುರುವಾಗುವುದು. ತನ್ನ ಹಳೆಯ –ಡಕ್ಲಾಸ್- ಪಿಕ್ಅಪ್ ಟ್ರಕ್ನಲ್ಲಿ ಏರ್ಪೋರ್ಟಿಗೆ ಹೋಗುವ ಜಾಂಗ್ಸೂ ತನ್ನ ಹೊಸ ಗೆಳತಿ ಹೇಯ್ಮಿಯನ್ನು ನೋಡಿದ್ದೇ ಖುಷಿಗೊಳ್ಳುತ್ತಾನೆ. ತುಟಿಯಲ್ಲೇ ನಗುವ ತಳುಕಿಸುತ್ತಾ ಖುಷಿಗೊಳ್ಳುವ ಅವನಿಗೆ ಹೇಯ್ಮಿ ಶಾಕ್ ಒಂದನ್ನು ನೀಡುತ್ತಾಳೆ. ಕೀನ್ಯಾದ ಏರ್ಪೋರ್ಟಿನಲ್ಲಿ ಸಿಕ್ಕ ಏಕೈಕ ಕೊರಿಯನ್ ಫ್ರೆಂಡ್ ಈತ ಎಂದು ಸುರಸುಂದರಾಂಗ ತರುಣನೊಬ್ಬನನ್ನು ಇವನಿಗೆ ಪರಿಚಯಿಸುತ್ತಾಳೆ. ಆತ ಸಿರಿವಂತರ ಮನೆಯ ಹುಡುಗನಂತೆ ಕಾಣುತ್ತಿದ್ದಾನೆ. ಆತನ ಹೆಸರು ಬೆನ್! ಇಲ್ಲಿಂದಲೇ ಸಿನಿಮಾದ ಸಂಘರ್ಷ ಶುರುವಾಗುವುದು. ಆದರೆ ಈ ಸಿನಿಮಾದ ಸಂಘರ್ಷ ಮಾಮೂಲಿ ಸಿನಿಮಾಗಳ ಸಂಘರ್ಷಗಳಂತಲ್ಲ! ಅದೊಂದು ತಣ್ಣಗಿನ ಸಂಘರ್ಷ, ಅಮೂರ್ತ ಸಂಘರ್ಷ! ಹೊರಗಣ್ಣುಗಳಿಗೆ ಕಾಣದ ಸಂಘರ್ಷ!
ಸದಾ ಮೋಜು ಮಸ್ತಿಗಳಲ್ಲಿ ಈಜಾಡುವ ಬೆನ್ಗೆ ದುಡ್ಡು ಬರುವ ಬಗೆಯಾದರೂ ಹೇಗೆ? ಏನೂ ಕೆಲಸ ಮಾಡುವುದಿಲ್ಲ ಎಂದು ಬೇರೆ ಹೇಳುತ್ತಾನೆ, ದುಬಾರಿ ಪೋಶ್ ಕಾರ್ ಇಟ್ಟುಕೊಂಡಿದ್ದಾನೆ, ಇರುವುದು ಕಾಸ್ಟ್ಲಿ ಅಪಾರ್ಟ್ಮೆಂಟಿನಲ್ಲಿ, ಸದಾ ಲಲನೆಯರ ಜೊತೆ ಓಡಾಟ... ಹೇಗೆ ಸಾಧ್ಯ!? ಇವು ಬೆನ್ನನ್ನು ಆಗಾಗ ಕಾಡುತ್ತಿರುವ ಪ್ರಶ್ನೆಗಳು. ಹೇಯ್ಮಿ ಬೆನ್ ಜೊತೆ ತಿರುಗಾಡುತ್ತಿರುವುದ ಕಂಡಾಗೆಲ್ಲ ಜಾಂಗ್ಸೂ ಹೇಗೆ ಫೀಲ್ ಮಾಡುತ್ತಾನೆ ಎನ್ನುವುದನ್ನು ನೀವು ಸಿನಿಮಾ ನೋಡಬೇಕು... ಜಾಂಗ್ಸೂನ ಆ ಭಾವನೆಯನ್ನು ಇಲ್ಲಿ ಮೂಡಿಸುವುದು ಕಷ್ಟ. ಮೂಲತಃ ಇಂಟ್ರೊವರ್ಟ್ ಆಗಿರುವ ಜಾಂಗ್ಸೂ ತನ್ನ ಒಳಗುದಿಯನ್ನು ಯಾರ ಬಳಿಯೂ ಹೇಳಲು ಅವಕಾಶಗಳಿಲ್ಲ. ಒಂದು ರಾತ್ರಿ ಹೇಯ್ಮಿಯೊಂದಿಗೆ ಬೆನ್ ಮನೆಯ ಪಾರ್ಟಿಗೆ ಹೋಗುವ ಜಾಂಗ್ಸೂ ಅಲ್ಲಿಯ ಪ್ರಖರ ಬೆಳಕಿನಲ್ಲಿ ಮೌನವಾಗಿ ಕೂತಿರುತ್ತಾನೆ. ಹೇಯ್ಮಿ ಅಲ್ಲಿ ನೆರೆದಿದ್ದವರೆದುರು ಆಫ್ರಿಕಾದ “ಗ್ರೇಟ್ ಹಂಗರ್ಸ್” ಡ್ಯಾನ್ಸ್ ಮಾಡಿ ತೋರಿಸುತ್ತಾ ಅವರನ್ನು ರಂಜಿಸುತ್ತಿರುತ್ತಾಳೆ. ಕೋಪಗೊಂಡರೂ ಮೌನವಾಗಿ ಕೂತಿರುವ ಜಾಂಗ್ಸೂ ತನ್ನಂತೆ ಬೆನ್ ಕೂಡ ಮೌನವಾಗಿರುವುದ ಕಂಡು ಅಚ್ಚರಿಗೊಳ್ಳುತ್ತಾನೆ. ಮತ್ತಷ್ಟು ಅಚ್ಚರಿಗೊಂಡು ಅವನು ನಿಲ್ಲುವುದು ವಾಶ್ ರೂಮಿಗೆ ಹೋದಾಗ! ಅಲ್ಲಿಯ ವಾರ್ಡ್ ರೋಬಿನಲ್ಲಿ ಅವನು ನೋಡುವ ವಸ್ತುಗಳಿಗೂ ಸಿನಿಮಾದ ಕ್ಲೈಮ್ಯಾಕ್ಸ್ ಗೂ ಸಂಬಂಧವಿದೆ. ಅದು ಏನೆಂಬುದನ್ನು ನೀವು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆನ್ನ ಈ ನಿಗೂಢ ಬದುಕು ಜಾಂಗ್ಸೂನನ್ನು ಮತ್ತಷ್ಟು ಅಚ್ಚರಿಗೆ ತಳ್ಳುವುದು ಹೇಯ್ಮಿಯ ಜೊತೆ ಬೆನ್ ಅವನ ಹಳ್ಳಿಯ ಮನೆಗೆ ದಿಢೀರ್ ಭೇಟಿ ಕೊಟ್ಟಾಗ.
ಮನೆಯ ಅಂಗಳದಲ್ಲಿ ಕೂತು ಮೂವರೂ ಮುಳುಗುತ್ತಿರುವ ಸೂರ್ಯನ ನೋಡುತ್ತಾ ‘ಇಂಡಿಯಾ’ದ ಭಂಗೀ ಸೇದುತ್ತಿರುತ್ತಾರೆ. ಮೊದಲ ಬಾರಿಗೆ ಗಾಂಜಾ ಸೇದುವವನಂತೆ ಕಾಣುವ ಜಾಂಗ್ಸೂನ ಭಂಗಿ ನೋಡಿ ಬಿದ್ದು ಬಿದ್ದು ನಗುವ ಹೇಯ್ಮಿ ಚಣ ಕಳೆಯುವುದರೊಳಗೆ ‘ಫುಲ್ ಟೈಟ್’ ಆಗಿ ತೇಲುತ್ತಿರುತ್ತಾಳೆ; ತನ್ನ ಟಾಪ್ನ್ನು ಕಿತ್ತು ಬಿಸಾಡುವ ಹೇಯ್ಮಿ ತೆರೆದ ಎದೆಯಲ್ಲಿ ಆಫ್ರಿಕಾದ ‘ಗ್ರೇಟ್ ಹಂಗರ್ಸ್’ ನೃತ್ಯವನ್ನು ಮಾಡಿ ತೋರಿಸುತ್ತಿರುತ್ತಾಳೆ. ಜಾಂಗ್ಸೂ ನಕ್ಕರೂ “ಒಳಗ್ ಒಳಗೆ” ನರಳುತ್ತಿರುತ್ತಾನೆ. ನಶೆಯ ನಿರ್ವಾಣಕ್ಕೆ ಆಕೆ ಜಾರಿದ್ದೇ ಅವಳನ್ನು ಒಳಗೆ ಎತ್ತಿಕೊಂಡು ಹೋಗಿ, ಸೋಫಾದಲ್ಲಿ ಮಲಗಿಸಿ ಇಬ್ಬರೂ ಹೊರಗೆ ಮುಳುಗುತ್ತಿರುವ ಸೂರ್ಯನ ನೋಡುತ್ತಾ ಕೂರುತ್ತಾರೆ. ಇಲ್ಲಿಂದಲೇ ಕ್ಲೈಮಾಕ್ಸ್ ಶುರುವಾಗುತ್ತದೆ ಎಂದು ಹೇಳಬಹುದು; ಅಥವ ಮೂರನೇ ಪ್ಲಾಟ್ ಪಾಯಿಂಟ್ ಇಲ್ಲಿಂದ ಶುರುವಾಗುತ್ತದೆ.
ಭಂಗಿಯ ಭೃಂಗದಲ್ಲಿ ತೇಲುತ್ತಿರುವವನಂತೆ ಕಾಣಿಸುವ ಬೆನ್ ತನ್ನ ವಿಚಿತ್ರವಾದ ಹವ್ಯಾಸವೊಂದನ್ನು ಜಾಂಗ್ಸೂನಿಗೆ ಹೇಳುತ್ತಾನೆ. ಅದನ್ನು ಕೇಳಿ ದಿಗ್ಭ್ರಮೆಗೊಳ್ಳುವ ಜಾಂಗ್ಸೂ ‘ಸುಳ್ ಹೇಳಬೇಡ, ಗುರು’ ಎನ್ನುತ್ತಾನೆ. ಆದರೆ ಬೆನ್ ‘ನಾ ಯಾಕೆ ಸುಳ್ ಹೇಳಲಿ ನಿನ್ನತ್ರ!? ಗ್ರೀನ್ಹೌಸ್ಗಳ ಹುಡುಕಿ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೆಂಕಿಯಿಡುತ್ತೇನೆ. ನನ್ನೀ ಹವ್ಯಾಸದ ಮೇಲೆ ನಿನಗೆ ಅನುಮಾನವಿದ್ದರೆ ಒಂದೆರೆಡು ದಿನ ಕಾದು ನೋಡು, ನಿನ್ನ ಹತ್ತಿರದ ಗ್ರೀನ್ಹೌಸೊಂದನ್ನು ಬೆಂಕಿ ಇಟ್ಟು ಮಟಾಶ್ ಮಾಡುತ್ತೇನೆ... ಆಗ ನಂಬುತ್ತಿ’ ಎಂದಾಗ ಜಾಂಗ್ಸೂನ ನರನಾಡಿಗಳೆಲ್ಲ ಬಿಗಿತುಕೊಂಡಂತಾಗಿ ಬೆನ್ನನ್ನೇ ನೋಡುತ್ತಾನೆ. ಬೆನ್ ತಣ್ಣಗೆ ನಕ್ಕು ದಿಗಂತವನ್ನು ನೋಡುತ್ತಾನೆ. ಯಾಕೀ ವಿಚಿತ್ರ ಹವ್ಯಾಸ ನಿನಗೆ? ಇದರ ಉದ್ದೇಶವಾದರೂ ಏನು? ಎಂಬ ಜಾಂಗ್ಸೂನ ಪ್ರಶ್ನೆಗೆ ಬೆನ್ ತನ್ನ ‘ಕಿಲ್ಲಿಂಗ್ ಸ್ಮೈಲ್’ನ್ನು ಸೂಸಿ ‘ದಿನವೂ ಹುಟ್ಟಿ ಮುಳುಗುವ ಆ ಸೂರ್ಯನಿಗೇನಾದರೂ ಉದ್ದೇಶ ಇದೆಯಾ ದೋಸ್ತ್!? ... ಹಾಗೆ ನನ್ನ ಹವ್ಯಾಸಕ್ಕೂ...’ ಎನ್ನುತ್ತಾನೆ. ಮಾತಿನ ನಡುವೆ ಜಾಂಗ್ಸೂ ಇನ್ನೇನು ಹೇಯ್ಮಿ ಮೇಲಿನ ತನ್ನ ಪ್ರೇಮವನ್ನು ಬೆನ್ ಬಳಿ ಹೇಳಬೇಕೆನ್ನುವಷ್ಟರಲ್ಲಿ ಹೇಯ್ಮಿ ನಶೆಯಿಂದೆದ್ದು ಹೊರಬರುತ್ತಾಳೆ. ಇವರಿಬ್ಬರ ಮಾತಿಗೆ ಬ್ರೇಕ್ ಬೀಳುತ್ತದೆ. ಚಣ ಕೂತು ಬೆನ್ ಮತ್ತು ಹೇಯ್ಮಿ ಹೊರಡುತ್ತಾರೆ. ಜಾಂಗ್ಸೂ ಹೇಯ್ಮಿಯ ಕಿವಿಯಲ್ಲಿ ತನ್ನ ಬೇಗುದಿಯನ್ನು ಸುರಿಯುತ್ತಾನೆ: 'ನಾಚಿಕೆ ಆಗಲ್ವೇನೆ ನಿಂಗೆ!? ಹಿಂಗೆ ಕಂಡಕಂಡವರೆದುರು ಬಟ್ಟೆ ಬಿಚ್ಚಿ ಸೂಳೆ ಥರ ಕುಣೀತಿಯಲ್ಲ' ಎನ್ನುವ ಅವನ ಮಾತಿಗೆ ಹೇಯ್ಮಿ ಏನೊಂದೂ ಮಾತನಾಡದೆ ಅವನನ್ನೊಮ್ಮೆ ನೋಡಿ ಕಾರಿನೊಳಗೆ ಕೂರುತ್ತಾಳೆ. ದಟ್ಟ ಹೊಗೆಯ ಹರಡಿ ಆ ದುಬಾರಿ ಕಾರ್ 'ಮಾಯ'ವಾಗುತ್ತದೆ.
ಮಾರನೇ ದಿನದಿಂದ ಜಾಂಗ್ಸೂ ತನ್ನ ಮನೆಯ ಬಳಿಯಿರುವ ಗ್ರೀನ್ಹೌಸ್ಗಳೆಲ್ಲವನ್ನೂ ಗಮನಿಸುತ್ತಿದ್ದಾನೆ; ಪ್ರತಿ ಬೆಳಿಗ್ಗೆಯೂ ಎಲ್ಲಾ ಹಸಿರುತಡಿಕೆಗಳನ್ನು ನೋಡಿಕೊಂಡು ಬರುತ್ತಿರುತ್ತಾನೆ, ಒಂದಕ್ಕೂ ಬೆಂಕಿ ಬಿದ್ದಿಲ್ಲ... ಈ ನಡುವೆ ಹೇಯ್ಮಿ ಸಿಗುತ್ತಿಲ್ಲ, ಅವಳಿಂದ ಒಮ್ಮೆ ಮಾತ್ರ ಕರೆ ಬರುತ್ತದೆ (ಪೂರ್ತಿ ಸಿನಿಮಾ ನೋಡಿದ ನಂತರ ಮತ್ತೆ ಈ ಕರೆಯಲ್ಲಿನ ಹೇಯ್ಮಿಯ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿ, ನಿಮ್ಮ ಮೈ ಜುಮ್ಮೆನ್ನುತ್ತದೆ... ನನಗಂತೂ ಬೀಜಗಳೇ ನಡುಗಿಹೋದವು). ಸುಮಾರು ಬಾರಿ ಆಕೆಯ ನಂಬರ್ ಗೆ ಪ್ರಯತ್ನಿಸುತ್ತಾನೆ. ಆಕೆ ಸಿಗುವುದೇ ಇಲ್ಲ. ಆಕೆಯನ್ನು ಹುಡುಕಿಕೊಂಡು ಸೂಪರ್ ಮಾರ್ಕೆಟ್, ಅವಳ ಡ್ಯಾನ್ಸ್ ಕ್ಲಾಸ್, ಅವಳ ಮನೆಯವರ ವಿಳಾಸ ಪತ್ತೆ ಹಚ್ಚಿ ಅಲ್ಲಿಗೂ ಹೋಗಿ ನೋಡುತ್ತಾನೆ, ಎಲ್ಲಿಯೂ ಅವಳ ಪತ್ತೆ ಇಲ್ಲ. ಕೊನೆಗೆ ಬೆನ್ನನ್ನು ಕೇಳುವ ತೀರ್ಮಾನಕ್ಕೆ ಬಂದು ಅವನ ಹುಡುಕಿಕೊಂಡು ಹೋಗುತ್ತಾನೆ. ಅವನನ್ನು ಹಿಂಬಾಲಿಸುತ್ತಾ ರೆಸ್ಟೋರೆಂಟ್ ಒಂದರಲ್ಲಿ ಅಕಸ್ಮಾತ್ ಆಗಿ ಸಿಕ್ಕಂತೆ ನಟಿಸುತ್ತಾ ದೇಶಾವರಿ ಮಾತನಾಡುತ್ತಾ ‘ನನ್ ಮನೆ ಹತ್ತಿರದ ಗ್ರೀನ್ಹೌಸಿಗೆ ಬೆಂಕಿ ಹಾಕ್ತೀನಿ ಅಂದ್ಯೆಲ್ಲ, ಗುರು... ಎಲ್ಲಿ ಹಾಕೇ ಇಲ್ಲ!?’ ಕೇಳುತ್ತಾನೆ. ಬೆನ್ ತನ್ನ ‘ಮರಣ ಮೃದಂಗ’ದ ನಗುವ ನಕ್ಕು ‘ಯಾವತ್ತೊ ಹಾಕಾಯ್ತು...’ ಎನ್ನುತ್ತಾನೆ. ಜಾಂಗ್ಸೂ ತಟ್ಟನೆ ‘ಸಾಧ್ಯವೇ ಇಲ್ಲ... ಪ್ರತಿದಿನ ಎರಡೆರೆಡು ಬಾರಿ ನನ್ ಏರಿಯಾ ತುಂಬಿ ಅಡ್ಡಾಡ್ತೀನಿ, ಒಂದು ಗ್ರೀನ್ಹೌಸ್ ಕೂಡ ಸುಟ್ಟು ಕರಕಲಾಗಿಲ್ಲ’ ಎನ್ನುತ್ತಾನೆ. ಬೆನ್ ಮತ್ತೆ ಅದೇ ಕಿಲ್ಲಿಂಗ್ ಸ್ಮೈಲ್ನಲ್ಲಿ ‘ನೀನು ಮಿಸ್ ಮಾಡಿದ್ದೀ ಬಿಡು’ ಎನ್ನುತ್ತಾನೆ. ಅದನ್ನು ಒಪ್ಪಲು ತಯಾರಿಲ್ಲದ ಜಾಂಗ್ಸೂವನ್ನು ಬೀಳ್ಕೊಟ್ಟು ತನ್ನ ಗೆಳತಿಯೊಬ್ಬಳೊಂದಿಗೆ ಹೊರಡಲು ಅಣಿಯಾಗುವ ಬೆನ್ನನ್ನು ಚಣ ನಿಲ್ಲುವಂತೆ ಹೇಳಿ ತಾನು ಅವನನ್ನು ಹುಡುಕಿಕೊಂಡು ಬರಲು ಕಾರಣವಾದ ಪ್ರಶ್ನೆಯನ್ನು ಕೇಳುತ್ತಾನೆ. ಬೆನ್ ಕ್ಯಾಷುವಲ್ ಆಗಿ ‘ನನಗೂ ಆಕೆ ಸಿಕ್ಕೇ ಇಲ್ಲ... ಎಲ್ಲಿ ಹೋದಳೊ ಗೊತ್ತಿಲ್ಲ... ಆದರೆ ಒಂದು ವಿಷಯ ಜಾಂಗ್ಸೂ, ಅವಳಿಗೆ ನೀನೊಬ್ಬನೇ ಬೆಸ್ಟ್ ಫ್ರೆಂಡ್ ಅಂತ ಹೇಳ್ತಾನೇ ಇರ್ತಿದ್ದಳು... ಆಗ ನನಗೆ ಜೀವನದಲ್ಲಿ ಫಸ್ಟ್ ಟೈಮ್ ಹೊಟ್ಟೆಕಿಚ್ಚಾಗಿದ್ದು ಸುಳ್ಳಲ್ಲ ಬಾಸ್...’ ಎಂದು ಹೇಳಿ ತನ್ನ ಪೋಷ್ ಕಾರ್ ಹತ್ತಿ ಗೆಳತಿಯೊಂದಿಗೆ ಚಣಾರ್ಧದಲ್ಲೇ ಮಾಯವಾಗುತ್ತಾನೆ.
ಜಾಂಗ್ಸೂವಿಗೆ ಈಗ ಎರಡು ಹುಡುಕಾಟಗಳು! ಬೆಂಕಿಗೆ ಬಿದ್ದ ತನ್ನ ಏರಿಯಾದ ಗ್ರೀನ್ಹೌಸ್ ಯಾವುದೆಂದು ಪತ್ತೆ ಹಚ್ಚುವುದು ಒಂದಾದರೆ, ಯಾರಿಗೂ ಸಿಗದೆ ಕಾಣೆಯಾಗಿರುವ ಗೆಳತಿ ಹೇಯ್ಮಿಯನ್ನು ಹುಡುಕುವುದು ಮತ್ತೊಂದು. ಇವುಗಳ ಕಂಡು ಹಿಡಿದನೇ ಎಂಬುದೇ ಕ್ಲೈಮಾಕ್ಸ್. ಆದರೆ ಜನಪ್ರಿಯ/ ವ್ಯಾಪಾರೀ ಸಿನಿಮಾಗಳಲ್ಲಿನ ಸಿದ್ಧಮಾದರಿಯ ಕ್ಲೈಮಾಕ್ಸ್ ಇಲ್ಲಿಲ್ಲ. ಅದು ನೀವೆಣಿಸಿಕೊಳ್ಳದಂತಹ ಒಂದು ಕ್ಲೈಮಾಕ್ಸ್! ಸಿನಿಮಾದ ಕೊನೆಯ ದೃಶ್ಯದಲ್ಲಿ ಜಾಂಗ್ಸೂ ಬೆನ್ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ನಗ್ನಗೊಂಡು ತನ್ನ ಡಕ್ಲಾಸ್ ಟ್ರಕ್ನಲ್ಲಿ ಹೊರಡುತ್ತಾನೆ.
ಇಷ್ಟು ಈ ಸಿನಿಮಾದ ಮೇಲ್ಪದರಿನ ಕಥೆ. ಆದರೆ ಕಥೆ ಇಷ್ಟಕ್ಕೇ ನಿಲ್ಲುವುದಿಲ್ಲ! ಅಥವ ಒಂದೇ ಕಥೆಯನ್ನು ಹೇಳುವಂತೆ ಕಂಡರೂ ಆಳದಲ್ಲಿ ಹಲವಾರು ಕಥೆಗಳನ್ನು ಹೊಂದಿದೆ. ಪದವೊಂದಕ್ಕೆ ಹೇಗೆ ಹತ್ತಾರು ಅರ್ಥಗಳೊ ಹಾಗೆ ಸಿನಿಮಾದ ಪ್ರತಿ ಸೀನ್ಗಳಿಗೂ/ ಪ್ರತಿ ಫ್ರೇಮ್ಗೂ ನೂರಾರು ಅರ್ಥಸಾಧ್ಯತೆಗಳಿವೆ ಎಂಬುದ ತೋರಿಸುವ ಸಿನಿಮಾ ಇದು. ಸ್ಲೊ ಪೇಸ್ನಲ್ಲಿ ಸಾಗುವ ಇಡೀ ಸಿನಿಮಾ ಬೆಟ್ಟದೊಳಕ್ಕೆ ಅಡಗಿಕೂತಿರುವ ಲಾವಾರಸದಂತೆ ನಮ್ಮ ಕಣ್ಣುಗಳೊಳಗೆ ಕುದಿಯುತ್ತಲೇ ಇರುತ್ತದೆ. ನೋಡುವ ನಮಗೆ ಸಮಾಧಾನ ಮತ್ತು ವ್ಯವಧಾನಗಳಿದ್ದರೆ ಅದರ ಜ್ವಾಲೆಗಳನ್ನು ಸೋಂಕಿಸಿಕೊಳ್ಳಬಹುದು.
ಪ್ರತಿಷ್ಠಿತ ಕಾನ್ ಸಿನಿಮೋತ್ಸವ ಗುರುತಿಸಿದ ಈ ಸಿನಿಮಾವನ್ನು ಕಾಣಲು ಕಾದು ಕುದ್ದು ಒಣಗಿ ಬೆಂಡೆದ್ದು ಹೋಗಿ ಕೊನೆಗೆ ಕೆಲ ತಿಂಗಳ ಹಿಂದೆ ನೋಡಿ ಒಂದು ವಾರವೆಲ್ಲ ತಿಣುಕಾಡಿದೆ. ಅದರ ಅರ್ಥಗಳನ್ನು ಅನುಭವಿಸುತ್ತಾ ಮೈಮರೆಯುತ್ತಿದ್ದೆ. ನೀವೂ ಖಂಡಿತಾ ತೊಳಲಾಡುತ್ತೀರಿ.
ಈ ಸಿನಿಮಾವನ್ನು ಮೊದಲ ಬಾರಿಗೆ ನೋಡಿ ಕಣ್ಣ ಮುಚ್ಚಿದಾಗ ನನ್ನ ತಲೆಯೊಳಗೆ ಎದ್ದ ಪ್ರಶ್ನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಕೆಲವು ಪ್ರಶ್ನೆಗಳನ್ನು ಇಲ್ಲಿ ಹೇಳಲಿಕ್ಕೂ ಆಗುತ್ತಿಲ್ಲ... ಯಾಕೆಂದರೆ ಅಂತಹ ಸಟ್ಲ್ ಸಿನಿಮಾ ಇದು... ನಾ ಗಟ್ಟಿಯಾಗಿಡಿದಿಟ್ಟುಕೊಂಡಿರುವ ಈ ಸಿನಿಮಾದ ಉಸಿರನ್ನು ಬಿಟ್ಟರೆ ಎಲ್ಲಿ ಆರಿ ಹೋಗುವುದೊ ಎಂಬ ಆತಂಕ! ತಟ್ಟಂಥ ಹೇಳಬಹುದಾದ ಪ್ರಶ್ನೆಗಳನ್ನು ಇಲ್ಲಿ ಇಡುತ್ತಿದ್ದೇನೆ. ಈ ಸಿನಿಮಾವನ್ನು ಈಗಾಗಲೇ ನೋಡಿದವರು ನೀವಾಗಿದ್ದರೆ ಬಹುಶಃ ನೀವೂ ಈ ಪ್ರಶ್ನೆಗಳ ಜೊತೆ ನಡೆದಾಡಿರುತ್ತೀರಿ. ಅಥವ ನಿಮಗೆ ಬೇರ್ಯಾವುದೊ ಪ್ರಶ್ನೆಗಳು ಎಡತಾಕಿದ್ದರೆ ನನಗೂ ಹಂಚಿ, ಜೊತೆಯಲ್ಲೇ ವಿರಮಿಸೋಣ.
ಪ್ರಶ್ನೆ 1:
ಜಾಂಗ್ಸೂ ಬೆನ್ನನ್ನು ಕೊಲ್ಲಲು ಕಾರಣವೇನು? ಅವನಿಗಿರುವ ಅನುಮಾನವೇನು? ಆ ಅನುಮಾನ ಅವನೊಳಗೆ ಮೂಡಲು ಕಾರಣವಾದ ಅಂಶಗಳೇನು?
ಜಾಂಗ್ಸೂ ಬೆನ್ನನ್ನು ಕೊಲ್ಲಲು ಕಾರಣವೇನು? ಅವನಿಗಿರುವ ಅನುಮಾನವೇನು? ಆ ಅನುಮಾನ ಅವನೊಳಗೆ ಮೂಡಲು ಕಾರಣವಾದ ಅಂಶಗಳೇನು?
ಪ್ರಶ್ನೆ 2:
ಹೇಯ್ಮಿ ಎಲ್ಲಿ ಹೋದಳು? ಅವಳನ್ನು ಕೊಲ್ಲಲಾಗಿದೆಯೇ? ಕೊಂದದ್ದು ಯಾರು?
ಹೇಯ್ಮಿ ಎಲ್ಲಿ ಹೋದಳು? ಅವಳನ್ನು ಕೊಲ್ಲಲಾಗಿದೆಯೇ? ಕೊಂದದ್ದು ಯಾರು?
ಪ್ರಶ್ನೆ 3:
ಗ್ರೀನ್ಹೌಸ್ಗಳ ಹುಡುಕಿ ಬೆಂಕಿ ಇಡುತ್ತೇನೆ ಎನ್ನುವ ಬೆನ್ನ ಡಿಕ್ಷನರಿಯಲ್ಲಿ ಗ್ರೀನ್ಹೌಸ್ ಎಂದರೆ ನಿಜವಾಗಲೂ ಗ್ರೀನ್ಹೌಸೇನಾ?
ಪ್ರಶ್ನೆ 4:
ಸೋಷಿಯೊಪಾತ್ ಕತೆಯೇಳುತ್ತಲೇ ಕೊರಿಯಾದ ಆರ್ಥಿಕ ಅಸಮಾನತೆಯನ್ನು ತೋರಿಸುತ್ತದೆಯೇ ಈ ಸಿನಿಮಾ? ಸಮಕಾಲೀನ ಬದುಕಿನ ‘ಅನ್ಯ’ ಮತ್ತು ‘ಮಾಯ’ಗಳ ಮಾಯಾವೀ ಸಿನಿಮಾ ನಿರೂಪಣೆಯೇ? ಇದನ್ನೇ ನಾವು ಸಮಕಾಲೀನ ಸಿನಿಮಾ ಎನ್ನಬಹುದೇ?
ಪ್ರಶ್ನೆ 5:
ಈ ಸಿನಿಮಾದಲ್ಲಿನ ಸಬ್ ಟೆಕ್ಸ್ಟ್ ಗಳು ಏನನ್ನು ಧ್ವನಿಸುತ್ತವೆ? ನವವಸಾಹತು ಸಮಾಜದ ಆರ್ಥಿಕ ಪಲ್ಲಟಗಳನ್ನು ಈ ಸಬ್ ಟೆಕ್ಸ್ಟ್ ಗಳು ಮಾತನಾಡುತ್ತವೆಯೇ ? ಆ ಮೂಲಕ ಒಟ್ಟು ಕಥೆಯ ಗ್ರಹಿಕೆಯೇ ಬದಲಾಗುತ್ತದೆಯೇ ?
ಬರ್ನಿಂಗ್ ಸಿನಿಮಾದ ಟ್ರೈಲರ್ :
ಹೀಗೆ ಇಲ್ಲಿಯ connotation ಗಳನ್ನು ನೀವು ನೋಡಿಯೇ ಅನುಭವಿಸಬೇಕು. ನಾ ಇಲ್ಲಿ ಹೇಳಿರುವುದು ಈ ಸಿನಿಮಾದ connotationನ ಶೇಕಡ 5% ರಷ್ಟನ್ನು ಮಾತ್ರ. ಇಲ್ಲಿಯ ಪ್ರತಿ ದೃಶ್ಯಗಳೂ ನಿಮ್ಮ ಕಣ್ಣುಗಳಿಗೆ ಕಿಡಿ ಹೊತ್ತಿಸುತ್ತಲೇ ಇರುತ್ತವೆ (ಪಾಪ್ಯುಲರ್ ಸಿನಿಮಾ/ ವ್ಯಾಪಾರೀ ಸಿನಿಮಾದ ಹೊರತಾದ ಸಿನಿಮಾಗಳನ್ನು ನೋಡುವವರು ನೀವಾಗಿದ್ದಲ್ಲಿ).
ಇನ್ನು ಈ ಸಿನಿಮಾದ ಎಡಿಟಿಂಗ್, ಸಿನಿಮಾಟೋಗ್ರಫಿ, ಸಂಗೀತ, ಕಲರ್ ಪ್ಯಾಟರನ್, ನಟನೆ ಇತ್ಯಾದಿ ತಾಂತ್ರಿಕ ಅಂಶಗಳು...
ಬೇಡ ಬಿಡಿ, ಅದ್ಯಾಕೆ. ಸಿನಿಮಾವನ್ನು ಮಾತ್ರ ನೋಡುವ ನಮಗೆ ಅವೆಲ್ಲ ಮುಖ್ಯವೆನಿಸದಿದ್ದರೂ ಗೊತ್ತಿಲ್ಲದಂತೆಯೇ ಅವುಗಳನ್ನೂ ನಾವು ಅನುಭವಿಸಿರುತ್ತೇವೆ. ಅದೇ ಒಂದು ಒಳ್ಳೆಯ ಸಿನಿಮಾದ ರುಚಿ. ಸಿನಿಮಾವನ್ನೇ ವೃತ್ತಿ ಮಾಡಿಕೊಂಡವರಿಗೆ, ಅಥವ ನನ್ನ ಹಾಗೆ ಪ್ರವೃತ್ತಿ ಮಾಡಿಕೊಂಡವರಿಗೆ ಮಾತ್ರ ಸಿನಿಮಾವೊಂದರ ತಾಂತ್ರಿಕ ಅಂಶಗಳು ಮುಖ್ಯವಾಗುತ್ತವೆ. ಮತ್ತು ಅದನ್ನು ನನ್ನಂತಹ ಔಟ್ ಫೀಲ್ಡ್ ವ್ಯಕ್ತಿ ಹೇಳುವುದು ಸರಿಯಾಗುವುದಿಲ್ಲ. ಆದರೂ ಸಂಗೀತದ ಬಗ್ಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ.
( ಹರೂಕಿ ಮುರಕಾಮಿ - ಜಪಾನಿ ಲೇಖಕ )
( ಹರೂಕಿ ಮುರಕಾಮಿ - ಜಪಾನಿ ಲೇಖಕ )
ಇಲ್ಲಿಯ ಬಿಜಿಎಂ- ಹಿನ್ನೆಲೆ ಸಂಗೀತ - ನಮ್ಮನ್ನು ಜೀಕಾಡಿಸುತ್ತಲೇ ಇರುತ್ತದೆ. ನನಗಂತೂ ಕೆಲವೊಮ್ಮೆ ನಮ್ಮ ಇಂಡಿಯನ್ ಮೂಲದ ಶಾಸ್ತ್ರೀಯ ಸಂಗೀತದ ವಾಸನೆ ಹೊಡೆಯಿತು. ಸಿನಿಮಾ ನೋಡಿದ ನಂತರ ಇದರ ಮೂಲವಾದ ಹರೂಕಿ ಮುರಕಾಮಿಯ 'Barn Burning' ಕತೆಯನ್ನು ಮತ್ತೊಮ್ಮೆ ಓದಿದೆ. ನನ್ನ ಮೂಗಿನ ಸಾಮರ್ಥ್ಯದ ಬಗ್ಗೆ ನನಗೇ ಹೆಮ್ಮೆಯೆನಿಸಿತು. ಆ ಕತೆಯಲ್ಲಿ ಬೆನ್ ಪಾತ್ರ ಜಾಂಗ್ಸೂ ಪಾತ್ರವನ್ನು ಕೇಳುತ್ತದೆ: ರವಿಶಂಕರ್ ಹಾಡುಗಳ ಸಿ.ಡಿಯೇನಾದರೂ ನಿನ್ನ ಬಳಿ ಇದೆಯಾ’ ಅಂತ! ಈ ಸಾಲನ್ನು ಆಧಾರವನ್ನಾಗಿಟ್ಟುಕೊಂಡು ಈ ಸಿನಿಮಾದ ಸಂಗೀತವನ್ನು ರೂಪಿಸಿರಬಹುದಾ ಎನ್ನುವ ಅನುಮಾನ ನನಗಿದೆ. ಬೆನ್ ಕ್ಲೀನ್/ ಪ್ಯೂರ್ ಬ್ಲೆಡ್ನವನು, DNA ದವನು- (ಅದನ್ನವನು ಒಂದು ಸೀನ್ನಲ್ಲಿ ಹೇಳುತ್ತಾನೆ)- ಕೆಟ್ಟ ರಕ್ತಗಳನ್ನು ಬೆಂಕಿ ಇಟ್ಟು ಸುಟ್ಟು ಹಾಕುವ ಅವನ ಧ್ಯೇಯಕ್ಕೆ ಈ ಸಂಗೀತ ಸರಿಯಾಗಿ ಮ್ಯಾಚ್ ಆಗುತ್ತದೆ. ನಮ್ಮಲ್ಲಿನ ವರ್ಣಾಶ್ರಮ ನೀತಿಯ ತಿರುಳಿಗೂ ಈ ಸಂಗೀತವನ್ನು ಇಲ್ಲಿ ಬಳಸಿಕೊಂಡಿರುವುದಕ್ಕೂ ಅದೆಷ್ಟು ಸಾಮ್ಯ! ವಾರೆವಾó... ಜಪಾನಿನ ಕತೆಯೊಂದು ಕೊರಿಯಾ ಸಿನಿಮಾವಾಗಿ ನಮ್ಮ ಭಾರತವನ್ನೂ ಬಿಡಿಸಿಡುವುದು ಅದೆಷ್ಟು ಸೋಜಿಗ!







Good write up. Sir your writing inspired me to watch it again. Thanks sir.
ReplyDeleteThanks dear Vasanth... You too often inspire me to write...
Deleteಸಿನಿಮಾ ಒಂದು ಮನರಂಜನೆ ಎನ್ನುವ ಮಂದಿಗೆ ಕೊರಿಯಾ ಮೂವಿ ಬರ್ನಿಂಗ್ ನಿಜಕ್ಕೂ ಉರಿ ತಂದಿಡುತ್ತೆ. ವಿವಿಧ ಆಯಾಮಗಳ ಬರ್ನಿಂಗ್ ಚಿತ್ರದುದ್ದಕ್ಕೂ ಸಾಗುತ್ತದೆ. ಅದೇ ರೀತಿಯಲ್ಲಿ ಹಸಿವೆಗೂ ಹಲವಾರು ಆಯಾಮಗಳಿವೆ. ಚಿತ್ರದ ನಾಯಕಿಗೆ ತನ್ನ ಬಾಲ್ಯ ಕಾಲದ ಮನೆ ನಾಶವಾಗಿದ್ದೂ ಕೂಡ ಹಸಿವೆಯಾಗಿ ಕಾಡುತ್ತೆ hunger dance ಮೂಲಕ ತನ್ನ ಪ್ರತಿರೋಧದ ನಡೆಯನ್ನು ದಾಖಲಿಸುತ್ತಾರೆ, ನಾಯಕನಿಗಿರಬಹುದಾದ ಬರವಣಿಗೆಯ ಹಂಗರ್ ಅನ್ನು ದೈಹಿಕ ಹಸಿವೆಯ ಮೂಲಕ ಹತ್ತಿಕ್ಕ ಪ್ರಯತ್ನಿಸುತ್ತಾನೆ, ಲೈಂಗಿಕ ಕ್ರಿಯೆಯೂ ಕೂಡ ಖಾಲಿ ಗೋಡೆಯಂತೆ ಕಾಣಸಿಗುತ್ತದೆ. ಇದು ಈ ಪಾತ್ರದ ಧ್ವಂಧ್ವವೂ ಕೂಡ ಆಗಬಹುದು. ಇನ್ನು ಖಳನಟ ಅಂತ ನಾವು ಕರೆಯುವುದಾದರೆ ಅವನ ವಿಲಾಸಿ ಬದುಕಿನ ಹಂಗರ್ ಕೂಡ ನಾಯಕಿಯಂತವರ ಹಂಗರ್ ಅವನ ಬಂಡವಾಳ...ನಾಯಕ, ನಾಯಕಿ, ಖಳನಟ ಎಂದು ಗುರುತಿಸುವುದೂ ದೋಷವಾದರೂ ಕೂಡ ಪಾತ್ರದ ಗುರುತಿಸುವಿಕೆಗಷ್ಟೇ ಸೀಮಿತ...
ReplyDelete
ReplyDeleteನನಗೇನೂ ಕೆಲಸವಿಲ್ಲ ಎಂದು ವಿಲಾಸಿ ಬದುಕು ಸಾಗಿಸುವವನ ಮಾತು ಗ್ರೀನ್ ಹೌಸ್ ಗಳನ್ನು ಸುಡುವುದು ನನ್ನ ಹವ್ಯಾಸ ಎನ್ನುವುದು ವಸಾಹತು ಶಾಹಿ ವಿರೋಧ ನಡೆಯಾಗಿ ಒಂದು ದಂಗೆಯಾಗಿ ಕಾಣುತ್ತೆ. ಆದರೆ ವಾಸ್ಥವವಾಗಿ ಆತ ವಸಾಹತು ಪರವಾಗಿ ಇರುತ್ತಾನೆ. ವಸಾಹತುಶಾಹಿ ವಿರೋಧಿಸುವ ನಾಯಕಿಯಂತಹ ದಂಗೆ ಕೋರರನ್ನ, ವಸಾಹತುಶಾಹಿಯನ್ನ ತನ್ನ hunger dance ಮೂಲಕ ಹಂಗಿಸುವವರನ್ನ ಗುರಿತಿಸಿ ಅವರನ್ನು ಇಲ್ಲವಾಗಿಸುವುದೇ ಅವನ ಕಾಯಕವಾಗಿರುತ್ತದೆ. ಇದನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ, ಇದಕ್ಕೆ ಸಾಕ್ಷಿಯಾಗಿ ಆತನ ಮನೆಯ ಬಾತ್ ರೂಮಿನಲ್ಲಿ ನ ಪದಾರ್ಥಗಳು ಹಾಗೆಯೇ ನಾಯಕನ ಮನೆಯಲ್ಲಿ ಸಿಗುವ ಚಾಕುಗಳ ಸಂಗ್ರಹವೂ ಇಂತಹ ವಸಾಹತುಶಾಹಿಗಳನ್ನ ಹತ್ತಿಕ್ಕುವ ಪರಿಕರಗಳಾಗಿ ಚಿತ್ರಿಸಲಾಗಿದೆ.
Nice reading dear Dayananda Gowda avare...
DeleteThank you sir...ಸಿನಿಮಾದ ಮಜಲುಗಳನ್ನು ನೋಡುವ ವೇದಿಕೆ ಒದಸಿದ್ದಕ್ಕೆ....
ReplyDelete